ಮಂಡ್ಯ: ಸರ್ಕಾರ ಪ್ರತಿ ಟನ್ ಕಬ್ಬಿಗೆ 4,500 ರೂ ಜತೆಗೆ ಭತ್ತ, ರಾಗಿ, ಜೋಳಕ್ಕೂ ವೈಜ್ಞಾನಿಕ ಬೆಂಬಲ ಬೆಲೆ ಕೊಡಬೇಕು ಎಂದು ರೈತ ಸಂಘದ(ರೈತಬಣ) ರಾಜ್ಯಾಧ್ಯಕ್ಷ ಇ.ಎನ್.ಕೃಷ್ಣೇಗೌಡ ಇಂಗಲಗುಪ್ಪೆ ಆಗ್ರಹಿಸಿದರು.
ಪ್ರತಿ ಸರ್ಕಾರ ರೂಪಿಸುವ ರೈತ ಕಾಯ್ದೆ ಬಂಡವಾಳ ಶಾಹಿಗಳ ಪರವಾಗಿಯೇ ಇದ್ದು, ರೈತರ ಬದುಕಿಗೆ ಮಾರಕವಾಗುತ್ತಿವೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಆದರೆ, ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಕೃಷಿ ವೆಚ್ಚ ದಿನೇದಿನೇ ಹೆಚ್ಚಾಗುತ್ತಿದೆ. ಕೆಎಂಎಫ್ ರೈತರಿಂದ ಖರೀದಿಸುವ ಹಾಲಿನ ಬೆಲೆಯನ್ನು ಕಡಿಮೆಗೊಳಿಸಿದೆ. ಮಹಿಳೆಯರಿಗೆ ಉಚಿತವಾಗಿ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸಿರುವುದರಿಂದ ಹತ್ತಾರು ರೀತಿಯ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಇದೆಲ್ಲದರ ಪರಿಣಾಮ ಹೋರಾಟ ರೂಪಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಹಿನ್ನೆಲೆಯಲ್ಲಿ ರೈತರಿಂದ ಖರೀದಿಸಿರುವ ಹಾಲಿನ ದರದಲ್ಲಿ 1.75ರೂ. ಕಡಿತಗೊಳಿಸಿರುವುದುನ್ನು ರದ್ದುಗೊಳಿಸಬೇಕು. ಪ್ರತಿ ಲೀಟರ್ ಹಾಲಿಗೆ 40 ರೂ ನಿಗದಿಪಡಿಸಬೇಕು. ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣವನ್ನು ರದ್ದುಪಡಿಸಿ, ಸ್ತ್ರೀ ಶಕ್ತಿ ಸಂಘಗಳ ಸಾಲಮನ್ನಾ ಮಾಡಬೇಕು. ರೈತ ಹುತಾತ್ಮರ ದಿನವಾದ ಜು.21ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಮೈಷುಗರ್‌ನಲ್ಲಿ ಈ ಹಿಂದೆ ನಡೆದಿರುವ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಾಜಿ ಅಧ್ಯಕ್ಷ ನಾಗರಾಜಪ್ಪ ಅವರ ಅಧಿಕಾರಾವಧಿಯಲ್ಲಿ ನಡೆದಿರುವ ಅವ್ಯವಹಾರಗಳ ಆರೋಪಗಳು ಉಪ ಲೋಕಾಯುಕ್ತರ ವರದಿಯಲ್ಲಿ ಸಾಬೀತಾಗಿದೆ. ಆದ್ದರಿಂದ ಕಾರ್ಖಾನೆಗೆ ಆಗಿರುವ ನಷ್ಟವನ್ನು ನಾಗರಾಜಪ್ಪ ಅವರಿಂದ ಮರುಪಾವತಿಸಲು ಕ್ರಮ ವಹಿಸಬೇಕು. ಅವರ ವಿರುದ್ಧ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಬೇಕೆಂದು ಆಗ್ರಹಿಸಿದರು.
ರಾಜ್ಯ ಗೌರವಾಧ್ಯಕ್ಷ ಹೆಮ್ಮಿಗೆ ಚಂದ್ರಶೇಖರ್ ಮಾತನಾಡಿ, ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಕಬ್ಬು ಬೆಳೆಗಳು ನೀರಿಲ್ಲದ ಒಣಗುತ್ತಿವೆ. ತಕ್ಷಣ ನಾಲೆಗಳಿಗೆ ನೀರು ಹರಿಸಿ, ಒಣಗುತ್ತಿರುವ ಬೆಳೆಗಳನ್ನು ರಕ್ಷಿಸಬೇಕು. ರೈತರ ಆದಾಯ ಮೂಲಗಳಿಗೆ ತಡೆಯೊಡ್ಡಬಾರದು. ಕಡಿತಗೊಳಿಸಿರುವ ಹಾಲು ಖರೀದಿ ದರ ಆದೇಶವನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಟಿ.ಎಂ.ರಮೇಶ್‌ಗೌಡ ಕಾಳೇನಹಳ್ಳಿ, ಮುಖಂಡ ಗುರುಸ್ವಾಮಿ ಹಾಜರಿದ್ದರು.