ಜಿಲ್ಲೆ

ಮೊದಲೇ ತಿಳಿಸಿದ್ದರೆ ಪ್ರತಿಭಟನೆ ಮಾಡುತ್ತಿರಲಿಲ್ಲ: ಶಾಸಕರಿಗೆ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ತಿರುಗೇಟು

reportermys

ಮಂಡ್ಯ: ಹನಕೆರೆ ಗ್ರಾಮದ ಬಳಿ ಸಂಚಾರ ತಡೆದು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಹೆದ್ದಾರಿ ಪ್ರಾಧಿಕಾರದವರು ಕಾಮಗಾರಿಗೆ ಅನುಮತಿ ನೀಡಿರುವ ಆದೇಶ ಪ್ರತಿಯನ್ನು ಕಳುಹಿಸಿದ್ದಾರೆ. ಒಂದು ವಾರದ ಹಿಂದೆಯೇ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಲಾಗಿತ್ತು. ಶಾಸಕರಿಗೆ ಮೊದಲೇ ಗೊತ್ತಿದ್ದರೆ ಮೊದಲೇ ಮಾಹಿತಿ ನೀಡಬಹುದಿತ್ತು. ಆಗ ನಾವು ಪ್ರತಿಭಟನೆಯನ್ನೇ ಮಾಡುತ್ತಿರಲಿಲ್ಲ ಎಂದು ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ತಿರುಗೇಟು ನೀಡಿದರು.

ಅಂಡರ್‌ಪಾಸ್ ವಿಚಾರದಲ್ಲಿ ಕ್ರೆಡಿಟ್ ರಾಜಕೀಯದ ಮಾತೇ ಇಲ್ಲ. ಹಿಂದಿನಿಂದ ಮಾಡಿದ ಹೋರಾಟ ಹಾಗೂ ಪಕ್ಷಾತೀತವಾಗಿ ನಡೆಸಿದ ಎಲ್ಲರ ಪ್ರಯತ್ನದಿಂದ ಕಾಮಗಾರಿಗೆ ಅನುಮತಿ ಸಿಕ್ಕಿದೆ. ಆದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ ಬಳಿಕವೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಮಾತ್ರವಲ್ಲದೆ ಹೆದ್ದಾರಿ ಪ್ರಾಧಿಕಾರದವರು ಗ್ರಾಮದ ಎರಡೂ ಕಡೆ ಫೆನ್ಸಿಂಗ್ ಮಾಡಿಸಿದ್ದರಿಂದ ಜನರಿಗೆ ಓಡಾಡಲು ಕಷ್ಟವಾಯಿತು. ಇದರಿಂದ ರೊಚ್ಚಿಗೆದ್ದ ರೈತರು ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಯಿತು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರತಿಭಟನೆ ನಂತರ ಎಚ್ಚೆತ್ತ ಅಧಿಕಾರಿಗಳು ಅಂಡರ್‌ಪಾಸ್ ನಿರ್ಮಾಣ ಮಾಡುವುದಾಗಿ ಹೇಳುತ್ತಾರೆ. ಫೆ.14ರಂದು ಆದೇಶ ಹೊರಡಿಸಲಾಗಿದೆ ಎಂದು ಶಾಸಕರು ಮಾಹಿತಿ ನೀಡುತ್ತಾರೆ. ಮಾತ್ರವಲ್ಲದೆ ಫೆ.17ರಂದು ಪತ್ರ ವ್ಯವಹಾರ ಮಾಡಿದ್ದರು ಆದೇಶ ಹೊರಡಿಸಿರುವ ವಿಚಾರ ತಿಳಿದಿಲ್ಲದಿರುವುದು ಹೇಗೆ ಎಂದು ಪ್ರಶ್ನಿಸಿದ ಅವರು, ಹೆದ್ದಾರಿ ಕಾಮಗಾರಿ ಬಗ್ಗೆ ಯಾವುದೇ ನಕಾಶೆಯನ್ನೂ ಬಿಡುಗಡೆ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದರಿಂದಲೇ ಇಂತಹ ಘಟನೆಗಳು ನಡೆಯಲು ಕಾರಣವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ಸಹಸ್ರಾರು ಜನರು ಬೀದಿಗೆ ಬಿದ್ದಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಮುಖಂಡರಾದ ನಾಗರಾಜು, ಶ್ರೀಕಾಂತ್, ಸತೀಶ್, ಸಿದ್ದೇಗೌಡ ಇದ್ದರು.