ಜಿಲ್ಲೆ

ಸದನದಲ್ಲಿ ರೈತರ ಸಮಸ್ಯೆ ಚರ್ಚಿಸದ ವಿಪಕ್ಷಗಳು: ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಆಕ್ರೋಶ

ಮಂಡ್ಯ: ಚಳಿಗಾಲದ ಅಧಿವೇಶನದಲ್ಲಿ ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸದ ಕಾಂಗ್ರೆಸ್ ಹಾಗೂ ಜೆಡಿಎಸ್ ನಡೆ ಖಂಡನೀಯ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಆಕ್ರೋಶ ವ್ಯಕ್ತಪಡಿಸಿದರು.
ವಿಪಕ್ಷಗಳು ರೈತರ ದನಿಯಾಗಿ ಕಾರ್ಯ ನಿರ್ವಹಿಸಿಲ್ಲ. ನಗರದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕರು, ಕಬ್ಬು ಹಾಗೂ ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿ ಸಂಬಂಧ ಸದನದಲ್ಲಿ ಚರ್ಚಿಸುವುದಾಗಿ ಹೇಳಿದ್ದರು. ಆದರೆ ಅವರು ಕೂಡ ಮಾತನಾಡಲಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಜೆಡಿಎಸ್ ಶಾಸಕರು ಸದನದಲ್ಲಿ ಪಾಲ್ಗೊಳ್ಳದೆ ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ. ರೈತರ ಪಕ್ಷವೆನ್ನುವ ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಪ್ರತಿ ಟನ್ ಕಬ್ಬಿನ ದರವನ್ನು 1100 ರೂ.ನಿಂದ 810 ರೂ.ಗೆ ಇಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಕಳೆದ ನಾಲ್ಕೂವರೆ ವರ್ಷದ ಅವಧಿಯಲ್ಲಿ ನಡೆದ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಎಚ್‌ಡಿಕೆ, ಈಗ ನಡೆಯುತ್ತಿರುವ ಅಧಿವೇಶನದ ಅವಶ್ಯಕತೆ ಇಲ್ಲ ಎನ್ನುವಂತೆ ಹೇಳಿರುವುದು ಸರಿಯಲ್ಲ. ಬಡವರು, ಶೋಷಿತರು, ರೈತರು ಸೇರಿದಂತೆ ಅಸಂಘಟಿತ ವಲಯದ ಬಗ್ಗೆ ಚರ್ಚಿಸಿ ಮಾರ್ಗೋಪಾಯ ಕಂಡು ಹಿಡಿಯಬೇಕಾದ ಎಚ್‌ಡಿಕೆ ಸದನ ಪ್ರವೇಶಿಸದೆ ಪಂಚರತ್ನ ಯಾತ್ರೆಗೆ ಜೋತು ಬಿದ್ದಿರುವುದು ಸರಿಯೇ ಎಂದು ಪ್ರಶ್ನಿಸಿದರು.
ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ತಮ್ಮ ಪುತ್ರನ ರಾಜಕೀಯ ಏಳಿಗೆಗಾಗಿ ಕ್ಷೇತ್ರ ತ್ಯಾಗ ಮಾಡಿ ಸ್ವಾರ್ಥ ಮೆರೆದಿದ್ದಾರೆ. ಕುಟುಂಬ ತ್ಯಾಗವನ್ನೇ ಸಾರ್ವಜನಿಕ ವೇದಿಕೆಯಲ್ಲಿ ಬಿಂಬಿಸಿಕೊಳ್ಳುವುದು ಎಷ್ಟು ಸರಿ? ಕ್ಷೇತ್ರ ಪಿತ್ರಾರ್ಜಿತ ಆಸ್ತಿಯಲ್ಲ ಅಥವಾ ಅನ್ಯರಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟಿಲ್ಲ. ಆದ್ದರಿಂದ ನಿಖಿಲ್ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿರುವ ಅನಿತಾ ಅವರ ತ್ಯಾಗ ಕುಟುಂಬಕ್ಕಷ್ಟೇ ಸೀಮಿತ ಎಂದು ವ್ಯಂಗ್ಯವಾಡಿದರು.
ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಲಿಂಗಪ್ಪಾಜಿ, ಮುಖಂಡರಾದ ಚಿದಾನಂದ್, ದಯಾನಂದ್, ಚಂದ್ರು, ವೆಂಕಟೇಶ್, ಜಗದೀಶ್ ಇತರರಿದ್ದರು.