ಮಂಡ್ಯ: ಪ್ರತಿ ಟನ್ ಕಬ್ಬಿಗೆ 4,500 ರೂ. ನಿಗದಿ ಮಾಡುವಂತೆ ಒತ್ತಾಯಿಸಿ ಹಲವು ದಿನಗಳಿಂದ ನಡೆಯುತ್ತಿರುವ ಹೋರಾಟದ ಮುಂದುವರಿದ ಭಾಗವಾಗಿ ಅಹೋರಾತ್ರಿ ಧರಣಿಗೆ ರೈತರು ಸಜ್ಜಾಗಿದ್ದಾರೆ. ಪ್ರತಿ ಬಾರಿಯೂ ಸಬೂಬು ಹೇಳುತ್ತ ಕಾಲ ಮುಂದೂಡುತ್ತಿರುವ ರಾಜ್ಯ ಸರ್ಕಾರದ ತೀರ್ಮಾನದ ವಿರುದ್ಧ ಆಕ್ರೋಶಗೊಂಡಿರುವ ರೈತ ಸಂಘದ ಕಾರ್ಯಕರ್ತರು ನ.7ರಿಂದ ಅನಿರ್ದಿಷ್ಟಾವಧಿ ಧರಣಿ ಮಾಡುತ್ತಿದ್ದಾರೆ.
ಕಬ್ಬು ಬೆಳೆಯಲು ರೈತರಿಗೆ ಹೆಚ್ಚಿನ ವೆಚ್ಚವಾಗುವುದರ ಜತೆಗೆ ಎಷ್ಟೋ ವರ್ಷದಿಂದ ದರ ಏರಿಕೆ ಮಾಡಿಲ್ಲ. ಪರಿಣಾಮ ಖರ್ಚು ಮಾಡಿದ ಹಣವೂ ರೈತರಿಗೆ ಸಿಗುತ್ತಿಲ್ಲ. ಆದ್ದರಿಂದ ಪ್ರತಿ ಟನ್ ಕಬ್ಬಿಗೆ 4,500 ರೂ. ನಿಗದಿ ಮಾಡುವಂತೆ ಒತ್ತಾಯಿಸಿ ವಿವಿಧ ರೀತಿಯ ಹೋರಾಟವನ್ನು ರಾಜ್ಯ ರೈತ ಸಂಘ ಮಾಡಿದೆ. ಆದರೆ ಇದಕ್ಕೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಬದಲಿಗೆ ನಿರ್ಲಕ್ಷೃ ಮುಂದುವರಿಸಿರುವ ಹಿನ್ನೆಲೆಯಲ್ಲಿ ಹೋರಾಟಕ್ಕೆ ಕರೆ ನೀಡಿದೆ.
ಗಮನ ಸೆಳೆದಿದ್ದ ಪೇ ಫಾರ್ಮರ್: ರಾಜ್ಯದಲ್ಲಿ ಕೆಲ ದಿನದ ಹಿಂದೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಪೇ ಸಿಎಂ ಜಟಾಪಟಿ ಜೋರಾಗಿ ನಡೆದಿತ್ತು. ಇದನ್ನೇ ಬಳಸಿಕೊಂಡು ರೈತ ಸಂಘದಿಂದ ಪ್ರತಿ ಟನ್ ಕಬ್ಬಿಗೆ 4,500 ರೂ. ನೀಡುವಂತೆ ‘ಪೇ ಫಾರ್ಮರ್’ ಅಭಿಯಾನ ಮಾಡಲಾಗಿತ್ತು. ಇದು ಸಾಕಷ್ಟು ಗಮನಸೆಳೆಯುವುದು ಮಾತ್ರವಲ್ಲದೆ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತ್ತು. ಇದಕ್ಕೂ ಮೊದಲು ನಗರದಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶವನ್ನು ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು.
ಇಷ್ಟಾದರೂ ಸ್ಪಂದಿಸದ ಹಿನ್ನೆಲೆಯಲ್ಲಿ ದಸರಾ ಹಬ್ಬದಂದು ಮೈಸೂರಿಗೆ ತಲುಪುವ ಎಲ್ಲ ಮಾರ್ಗದ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಿತ್ತು. ಆ ವೇಳೆ ಪ್ರತಿಭಟನಾಕಾರರನ್ನು ಬಂಧಿಸಲಾಗಿತ್ತು. ಆದರೆ ರೈತ ಸಂಘದ ಬೇಡಿಕೆ ಬಗ್ಗೆ ಯಾವ ನಿರ್ಧಾರವನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ ಧರಣಿ ನಡೆಸಲಾಗುತ್ತಿದೆ. ಈ ಬಾರಿ ಕೆಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪ್ರತಿ ದಿನವೂ ಜನರು ಸೇರುವಂತೆ ಮಾಡಲು ರೂಪುರೇಷೆ ಸಿದ್ಧಪಡಿಸಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಜಿಲ್ಲೆಯನ್ನು ಜನರನ್ನು ಬೆಂಬಲಿಸುವಂತೆ ಮನವಿ ಮಾಡಲಾಗುತ್ತಿದ್ದು, ಇದಕ್ಕೆ ಸಕಾರಾತ್ಮಕ ಸ್ಪಂದನೆಯೂ ಸಿಗುತ್ತಿದೆ. ಜತೆಗೆ ಬೇರೆ ಸಂಘಟನೆಗಳ ಬೆಂಬಲವನ್ನೂ ಕೇಳಲಾಗುತ್ತಿದೆ.
ಸರ್‌ಎಂವಿ ಪ್ರತಿಮೆ ಎದುರು ಧರಣಿ: ಪ್ರತಿ ಟನ್ ಕಬ್ಬಿಗೆ 4,500 ರೂ. ದರ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ನ.7ರಿಂದ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ತಿಳಿಸಿದರು.
ನಮ್ಮ ಬೇಡಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ ಭರವಸೆ ಹುಸಿಯಾಗಿದೆ. ಹಾಗಾಗಿ, ಹೋರಾಟ ಅನಿವಾರ್ಯ. ಜು.11ರಂದು ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶೀಘ್ರದಲ್ಲೇ ದರ ಘೋಷಣೆ ಮಾಡುವುದಾಗಿ ತಿಳಿಸಿದ್ದರು. ಅಲ್ಲದೆ ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿ ವಿದ್ಯುತ್ ಬಳಕೆದಾರರ ಬಿಲ್ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಯಾವ ಭರಸವೆಯೂ ಈಡೇರಿಲ್ಲ. ಪರಿಣಾಮ ಜಿಲ್ಲೆಯ ವಿವಿಧೆಡೆ ಸೆಸ್ಕ್ ನೌಕರರು ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಬಡವರಿಗೆ ತೊಂದರೆ ನೀಡುತ್ತಿದ್ದಾರೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಪ್ರತಿಭಟನೆ ನಡೆಸಿದಾಗ ಅವರು ಪ್ರತಿ ಟನ್ ಕಬ್ಬಿಗೆ 150 ರೂ ಎಸ್‌ಎಪಿ ಘೋಷಣೆ ಮಾಡಿದ್ದರು. ಆದರೆ ಈ ವರ್ಷ ದಸರಾ ಸಂದರ್ಭದಲ್ಲಿ ಮಂಡ್ಯ-ಮೈಸೂರು ಜಿಲ್ಲೆಯ 8 ಕಡೆ ರೈತರು ರಸ್ತೆ ತಡೆ ನಡೆಸಿದರೂ, ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ಈ ಸಂಬಂಧ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ನೀಡಿದ ಭರವಸೆ ಹುಸಿಯಾಗಿದೆ. ಸಕ್ಕರೆ ಸಚಿವರು ದೀಪಾವಳಿಗೆ ಸಿಹಿ ಸುದ್ದಿ ನೀಡುವುದಾಗಿ ಹೇಳಿದ್ದರೂ ಅದು ನೆರವೇರಲಿಲ್ಲ. ಆದ್ದರಿಂದ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.
ಇನ್ನು ಪ್ರತಿ ಲೀ. ಹಾಲಿಗೆ ಉತ್ಪಾದಕರಿಗೆ ಕೇವಲ 1 ರೂ. ಹೆಚ್ಚಳ ಮಾಡಿ, ಪಶು ಆಹಾರದ ಬೆಲೆಯನ್ನು ಏಕಾಏಕಿ 125 ರೂ.ಗೆ ಏರಿಸುವ ಮೂಲಕ ಮುನ್‌ಮುಲ್ ರೈತರಿಗೆ ಬರೆ ಹಾಕಿದೆ. ಪಕ್ಕದ ರಾಜ್ಯದವರು ಪ್ರತಿ ಲೀ. ಹಾಲಿಗೆ ಯಾವುದೇ ಪರೀಕ್ಷೆ ಮಾಡದೆ 40 ರೂ. ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಆದರೆ ಮನ್‌ಮುಲ್ 29 ರೂ. ನೀಡುವ ಮೂಲಕ ರೈತರನ್ನು ವಂಚಿಸುತ್ತಿದೆ ಎಂದು ದೂರಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್, ಕೆ.ಟಿ.ಗೋವಿಂದೇಗೌಡ, ಪ್ರಸನ್ನ ಎನ್.ಗೌಡ, ಶಿವಳ್ಳಿ ಚಂದ್ರಶೇಖರ್, ರವಿಕುಮಾರ್, ಕುಮಾರ್, ಮುಟ್ಟನಹಳ್ಳಿ ವೆಂಕಟೇಶ್ ಉಪಸ್ಥಿತರಿದ್ದರು.
ಆಣೆಯಿಂದ ಅಭಿವೃದ್ಧಿಯಾಗಲ್ಲ: ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಮಾತನಾಡಿ, ಸಂಸದೆ ಸುಮಲತಾ ಹಾಗೂ ಜೆಡಿಎಸ್ ಶಾಸಕರ ಆಣೆ-ಪ್ರಮಾಣದ ವಾಗ್ವಾದದಿಂದ ಜಿಲ್ಲೆಯ ಅಭಿವೃದ್ಧಿಯಾಗಲ್ಲ. ಸ್ಥಳೀಯ ಜನಪ್ರತಿನಿಧಿಗಳು ಮಾಡುವ ಕೆಲಸವನ್ನು ಬಿಟ್ಟು ಆಣೆ-ಪ್ರಮಾಣ ಮಾಡುವಂತೆ ಪರಸ್ಪರ ಹೇಳಿಕೆ ನೀಡುವ ಮೂಲಕ ಕಾಲಹರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ನಗರದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಸುಮಾರು 11 ಸಾವಿರ ಮನೆಗಳಿಗೆ ಹಕ್ಕುಪತ್ರ ಇಲ್ಲ. ಈ ಸಮಸ್ಯೆಗಳು ಅವರ ಕಣ್ಣಿಗೆ ಬೀಳುತ್ತಿಲ್ಲವೇ? ರಸ್ತೆ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಹಾಗಿದ್ದರೆ ಶಾಶ್ವತ ಪರಿಹಾರ ಯಾವಾಗ ಎಂದು ಪ್ರಶ್ನಿಸಿದರು.
ಸಂಸದೆ ಸುಮಲತಾ ಹಾಗೂ ಜೆಡಿಎಸ್ ಶಾಸಕರಿಗೆ ಬದ್ಧತೆ ಇದ್ದರೆ ಪ್ರತಿ ಟನ್ ಕಬ್ಬಿಗೆ 4,500 ರೂ. ದರ ನಿಗದಿ ಮಾಡಿಸಲಿ. ಅದನ್ನು ಬಿಟ್ಟು ನಾಟಕವಾಡಿಕೊಂಡು ತಿರುಗುವುದು ಬೇಡ. ನಮ್ಮ ಧರಣಿ ಅನಿರ್ದಿಷ್ಟಾವಧಿವರೆಗೆ ನಡೆಯಲಿದ್ದು, 4,500 ರೂ. ಬೆಲೆ ನಿಗದಿ ಮಾಡುವವರೆಗೆ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.