ಜಿಲ್ಲೆ

ಹಣ, ಆಸ್ತಿ ಮಾಡಲು ಅಮೆರಿಕದಿಂದ ಬಂದಿಲ್ಲ: ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ಹೇಳಿಕೆ

reportermys

ಪಾಂಡವಪುರ: ಚುನಾವಣೆಯಲ್ಲಿ ಗೆದ್ದು ಹಣ, ಆಸ್ತಿ ಮಾಡಬೇಕೆಂಬ ಆಸೆಯಿಂದ ಅಮೆರಿಕದಿಂದ ಇಲ್ಲಿಗೆ ಬಂದಿಲ್ಲ. ಹೊಸ ಆಲೋಚನೆಯೊಂದಿಗೆ ರೈತ ಹೋರಾಟದ ಜತೆಗೆ ಜನಸೇವೆ ಮಾಡಲು ಐಷಾರಾಮಿ ಜೀವನ ತ್ಯಜಿಸಿ ಬಂದಿದ್ದೇನೆ ಎಂದು ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ರೈತ ಸಂಘದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನನಗೆ ರಾಜಕೀಯ ಅನುಭವ ಕಡಿಮೆ. ಈ ಕ್ಷೇತ್ರದಲ್ಲಿ ಕಲಿಯ ಬೇಕಾಗಿರೋದು ಸಾಕಷ್ಟಿದೆ ಎಂಬುದು ಗೊತ್ತಿದೆ. ಆದರೆ, ತಂದೆ ಹಾಕಿಕೊಟ್ಟಿರುವ ಹಾದಿಯಲ್ಲಿ ನಿಯತ್ತಿನಿಂದ ದುಡಿಯುವುದು ಚೆನ್ನಾಗಿ ತಿಳಿದಿದೆ. ಕ್ಷೇತ್ರದ ಜನರ ಮೇಲಿರುವ ಪ್ರೀತಿಯಿಂದಾಗಿ ಬದುಕಿಗೆ ಆಸರೆಯಾಗಿದ್ದ ವಿದೇಶದಲ್ಲಿನ ಎಲ್ಲ ವ್ಯವಹಾರಗಳನ್ನು ತುಂಡರಿಸಿಕೊಂಡು ರೈತರ ಧ್ವನಿಯಾಗಿ ಕೆಲಸ ಮಾಡಲು ಕ್ಷೇತ್ರಕ್ಕೆ ವಾಪಸ್ ಬಂದಿದ್ದೇನೆ. ಮುಂದಿನ ಚುನಾವಣೆಯಲ್ಲಿ ಸೋಲು, ಗೆಲುವು ಏನೇ ಆಗಲಿ ನಿರಂತರ ಹೋರಾಟ ಮಾಡುವುದಾಗಿ ಭರವಸೆ ನೀಡಿದರು.

ಇತ್ತೀಚೆಗೆ ಚುನಾವಣಾ ವ್ಯವಸ್ಥೆಗಳು ಬದಲಾಗಿದ್ದು, ಹಣ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಎಲ್ಲರಂತೆ ನಾವು ಚುನಾವಣೆ ಮಾಡಿದರೆ ಅದಕ್ಕೆ ಅರ್ಥವಿರುವುದಿಲ್ಲ. ನ್ಯಾಯ, ನೀತಿಯಿಂದ ಚುನಾವಣೆ ಎದುರಿಸಿ ಗೆಲುವು ಸಾಧಿಸಬೇಕಿದೆ. ಇದರಿಂದ ರಾಜ್ಯಕ್ಕೆ ಒಂದು ಸ್ಪಷ್ಟ ಸಂದೇಶ ರವಾನಿಸಬಹುದು. ಸರಳ ವ್ಯಕ್ತಿತ್ವದ ಕೆ.ಎಸ್.ಪುಟ್ಟಣ್ಣಯ್ಯ ಅವರು ಒಂದು ಸಿದ್ಧಾಂತದ ಮೇಲೆ ಸಂಘಟನೆ ಕಟ್ಟಿದ್ದಾರೆ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಶಾಸಕರಾದವರು ಗುತ್ತಿಗೆ ಕೆಲಸ, ದೇವಸ್ಥಾನ ಅಭಿವೃದ್ಧಿ ಎಂದು ಅಷ್ಟಕ್ಕೆ ಸೀಮಿತವಾಗುತ್ತಾರೆ. ಶಿಕ್ಷಣ, ಆರೋಗ್ಯ, ಗ್ರಾಮಗಳ ಸಮಗ್ರ ಅಭಿವೃದ್ಧಿ ಇತರ ವಿಚಾರಗಳ ಬಗ್ಗೆ ಗಮನಹರಿಸುವುದಿಲ್ಲ. ಹಳ್ಳಿಗಳ ಮರು ನಿರ್ಮಾಣಕ್ಕಾಗಿ 2006ರಿಂದಲೇ ಯೋಜನೆ ರೂಪಿಸಿದ್ದು, ಹೊಸ ಆಲೋಚನೆಗಳೊಂದಿಗೆ ಗ್ರಾಮ ಕಟ್ಟುವ ಕೆಲಸ ಮಾಡಬೇಕಿದೆ ಎಂದರು.

ರೈತನಾಯಕಿ ಸುನೀತಾ ಪುಟ್ಟಣ್ಣಯ್ಯ ಮಾತನಾಡಿ, ರೈತ ಸಂಘದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಗೆದ್ದರೆ ಪ್ರತಿಯೊಬ್ಬ ರೈತರು ಗೆದ್ದಂತೆ. ಅಪ್ಪನ ಹಾದಿಯಲ್ಲಿ ನಡೆಯೋ ಆಸೆ ವ್ಯಕ್ತಪಡಿಸಿ ಎಲ್ಲವನ್ನೂ ಬಿಟ್ಟು ಬಂದಿದ್ದಾನೆ. ನಮ್ಮಲ್ಲಿರುವ ಮುನಿಸುಗಳನ್ನು ಬದಿಗಿಟ್ಟು ಚುನಾವಣೆಯ ಜವಾಬ್ದಾರಿ ನಿಭಾಯಿಸಬೇಕು. ಒಳ್ಳೆತನ ಇರುವ ಕಡೆ ಹೋರಾಟ ಕಷ್ಟ. ಆದರೆ ಒಗ್ಗೂಡಿ ಚುನಾವಣೆ ಎದುರಿಸೋಣ ಎಂದು ತಿಳಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ರೈತರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ನಿರಂತರ ಹೋರಾಟ ಮಾಡುತ್ತಿದ್ದರೂ ಯಾವೊಬ್ಬ ಶಾಸಕರು ಪ್ರತಿಭಟನೆಗೆ ಬೆಂಬಲ ಸೂಚಿಸಲಿಲ್ಲ. ಜಿಲ್ಲೆಯ ಏಳು ಶಾಸಕರು ಸದನದಲ್ಲಿ ರೈತರ ಮತ್ತು ಕಬ್ಬಿನ ವಿಚಾರ ಪ್ರಸ್ತಾಪಿಸಲಿಲ್ಲ. ಹೀಗಾಗಿ ರೈತ ಸಂಘಟನೆಗೆ ಬಲ ತುಂಬಿ ಆ ಮೂಲಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಿದೆ. ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗಗಳ ಜತೆಗೆ ಚಳವಳಿ ಎಂಬ ಅಂಗ ಇರಬೇಕು. ಕೆ.ಎಸ್.ಪುಟ್ಟಣ್ಣಯ್ಯ ಅವರು ನಾಲ್ಕು ದಶಕಗಳ ಕಾಲ ಸಂಘಟನೆಯ ತೇರು ಎಳೆದರು. ಈಗ ಆ ಜವಾಬ್ದಾರಿಯನ್ನು ದರ್ಶನ್ ಪುಟ್ಟಣ್ಣಯ್ಯ ನಿಭಾಯಿಸಲಿದ್ದಾರೆ. ಅಧಿಕಾರಿಗಳ ದರ್ಪ ತಡೆಯಲು ಜನಪ್ರತಿನಿಧಿಗಳಿಂದ ಸಾಧ್ಯವಿಲ್ಲ. ಆ ಶಕ್ತಿ ಇರೋದು ರೈತ ಸಂಘಕ್ಕೆ ಮಾತ್ರ. ಚುನಾವಣೆ ಗೆಲ್ಲಲು ಸಮಯ ಪರಿಪಕ್ವವಾಗಿದ್ದು, ನಾವು ಮತ ಕೇಳಬೇಕಿದೆಯಷ್ಟೆ ಎಂದು ಹೇಳಿದರು.

ರೈತ ಸಂಘದ ಮಹಿಳಾ ಅಧ್ಯಕ್ಷೆ ನಂದಿನಿ ಜಯರಾಮ್, ತಾಲೂಕು ಅಧ್ಯಕ್ಷ ನಾಗರಾಜು, ಸ್ಮಿತಾ ಪುಟ್ಟಣ್ಣಯ್ಯ, ಕೆನ್ನಾಳು ವಿಜಯಕುಮಾರ್, ಜಿ.ಪಂ. ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಗೌಡೇಗೌಡ, ಎಸ್.ದಯಾನಂದ್, ವಿಶ್ವನಾಥ್ ಇತರರು ಇದ್ದರು.