ಜಿಲ್ಲೆ

ಹೋರಾಟದಿಂದ ರೈತ ಸಂಕುಲಕ್ಕೆ ಅನುಕೂಲ: ಯುವ ನಾಯಕ ದರ್ಶನ್ ಪುಟ್ಟಣ್ಣಯ್ಯ ಹೇಳಿಕೆ

ಮಂಡ್ಯ: ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಮಾಡುತ್ತಿರುವ ಹೋರಾಟದಿಂದ ಮುಂದಿನ ಇಡೀ ರೈತ ಸಂಕುಲಕ್ಕೆ ಅನುಕೂಲವಾಗಲಿದೆ ಎಂದು ರೈತ ಸಂಘದ ಯುವ ನಾಯಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ನಗರದ ಗುತ್ತಲಿನಲ್ಲಿ ರೈತ ಸಂಘದ ಘಟಕ ಉದ್ಘಾಟಿಸಿ ಮಾತನಾಡಿದರು. ನಿರಂತರ ಹೋರಾಟದ ಫಲವಾಗಿ ಬ್ರಿಟಿಷರಿಂದ ದೇಶದ ಜನರಿಗೆ ಸ್ವಾತಂತ್ರ್ಯ ದೊರಕಿತು. ಆದ್ದರಿಂದ ನಮ್ಮ ಹೋರಾಟ ಕೂಡ ರೈತರಿಗಾಗಿಯೇ ನಡೆಯುತ್ತಿದೆ. ಹಸಿರು ಟವಲ್ ಧರಿಸಿ ಆಸೆ, ಆಕಾಂಕ್ಷೆ, ಯಾವುದೇ ತರದ ಆಮಿಷಗಳಿಗೆ ಬಲಿಯಾಗದೆ ಸರ್ವರಿಗೂ ಒಳಿತನ್ನು ಬಯಸುತ್ತಾ ನ್ಯಾಯಪರವಾದ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಾ ಸಾಗೋಣ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಮಾತನಾಡಿ, ಕಳೆದ 30 ವರ್ಷದ ಹಿಂದೆ ಮಂಡ್ಯ ಹೇಗಿತ್ತೋ ಇಂದು ಸಹ ಹಾಗೆಯೇ ಇದೆ. ಬೆಂಗಳೂರು ಮತ್ತು ಮೈಸೂರು ನಡುವೆ ಇದ್ದರೂ ಸ್ಥಳೀಯವಾಗಿ ಕೆಲಸ ಮಾಡಲು ಮಂಡ್ಯದಲ್ಲಿ ಕೈಗಾರಿಕೆಗಳಿಲ್ಲ. ಇದ್ದ ಕೈಗಾರಿಕೆಗಳು ಸಹ ಇಚ್ಛಾಸಕ್ತಿ ಇಲ್ಲದ ರಾಜಕಾರಣಿಗಳಿಂದ ಮಾಯವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸಮಿತಿ ಸದಸ್ಯ ಪ್ರಸನ್ನ ಎನ್.ಗೌಡ ಮಾತನಾಡಿ, ರೈತ ಸಂಘ ಎನ್ನುವುದು ಯಾವುದೇ ವ್ಯಕ್ತಿಯಲ್ಲ. ಯಾವುದೇ ಜಾತಿ, ಧರ್ಮವಾದರೂ ಎಲ್ಲರಿಗೂ ಸಮಾನವಾದ ಅವಕಾಶ ಸಿಗಬೇಕು. ಈ ಸಿದ್ಧಾಂತಕ್ಕಾಗಿ ಹಲವಾರು ಜನರು ಅಮೂಲ್ಯ ಸಮಯ ಮೀಸಲಿಟ್ಟು ಸಂಘ ಕಟ್ಟಿದ್ದಾರೆ ಎಂದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಲ್.ಕೆಂಪುಗೌಡ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಖಜಾಂಚಿ ತಗ್ಗಳ್ಳಿ ಪ್ರಸನ್ನ, ಗುತ್ತಲು ಗ್ರಾಮ ಘಟಕದ ಇಸ್ಮಾಯಿಲ್, ವಸೀಂ ಬೆಸಗರಹಳ್ಳಿ, ಎಜಾಜ್ ಪಾಷಾ, ಬಾಬು, ಪೈರೋಜ್ ಇತರರಿದ್ದರು.

ಇದೇ ವೇಳೆ ನೂರಕ್ಕೂ ಹೆಚ್ಚು ಮುಸ್ಲಿಂ ಮುಖಂಡರು ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಹಸಿರು ಟವಲ್ ಧರಿಸುವುದರ ಮೂಲಕ ಅಧಿಕೃತವಾಗಿ ರೈತ ಸಂಘಕ್ಕೆ ಸೇರ್ಪಡೆಗೊಂಡರು.