ಮಂಡ್ಯ: ನಮ್ಮ ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ರೈತರು ಒಗ್ಗಟ್ಟಾಗಬೇಕಾದ ಅನಿವಾರ್ಯತೆ ಇದೆ ಎಂದು ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಸಲಹೆ ನೀಡಿದರು.
ತಾಲೂಕಿನ ಪಂಚೆಗೌಡನದೊಡ್ಡಿ ಗ್ರಾಮದಲ್ಲಿ ರೈತ ಸಂಘದ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ರಾಜಕಾರಣಿಗಳು ತಮ್ಮ ಅಧಿಕಾರದಾಸೆಗೆ ರೈತರ ಒಗ್ಗಟ್ಟನ್ನು ಒಡೆಯಲು ಪ್ರಯತ್ನಿಸಿ ಅದರಲ್ಲಿ ಕೊಂಚಮಟ್ಟದ ಯಶಸ್ಸು ಸಾಧಿಸಿದ್ದಾರೆ. ಇದರಿಂದ ನಾವು ಬೆಳೆದ ಬೆಳೆಗಳಿಗೆ ಸರಿಯಾದ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಜತೆಗೆ ಸರಿಯಾದ ಬೆಲೆಗಳನ್ನು ಕೊಡಿ ಎಂದು ಪ್ರಶ್ನಿಸುತ್ತಿರುವ ರೈತ ಸಂಘಟನೆಯ ಕಾರ್ಯಕರ್ತರ ಸಂಖ್ಯೆಯು ಕಡಿಮೆಯಾಗಿರುವುದು ಬೇಸರದ ವಿಷಯ ಎಂದರು.
ಸ್ವಾತಂತ್ರ್ಯದ ನಂತರವೂ ಕೂಡ ರೈತರನ್ನು ಸರ್ಕಾರ ಮತ್ತು ಆಡಳಿತಾಧಿಕಾರಿಗಳು ತುಚ್ಚವಾಗಿ ನಡೆಸಿಕೊಳ್ಳುತ್ತಿದ್ದರು. ಆದರೆ ರೈತ ಸಂಘ ಬಲಿಷ್ಟವಾಗುತ್ತಾ ಹೋದಂತೆ ವ್ಯವಸ್ಥೆಯನ್ನು ಪ್ರಶ್ನಿಸುವ ಮತ್ತು ನಮಗೆ ಬೇಕಾದ ನ್ಯಾಯವನ್ನು ಪಡೆದುಕೊಳ್ಳಲು ತಿರುಗಿ ಬಿದ್ದಾಗ ಸರ್ಕಾರವು ರೈತರ ಮಾತನ್ನು ಕೇಳಲು ಶುರುಮಾಡಿತು. ಈ ನಡುವೆ ರೈತರ ಒಗ್ಗಟ್ಟು ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ರೈತರು ಮತ್ತೆ ಸಂಘಟನೆಯಾಗಬೇಕು. ಆಗ ಮಾತ್ರ ಪ್ರಭುತ್ವ ನಮ್ಮ ಮಾತನ್ನು ಕೇಳುತ್ತದೆ. ಅದಕ್ಕಾಗಿ ನಾವು ಪ್ರತಿ ಗ್ರಾಮಮಟ್ಟದಲ್ಲಿ ಸಂಘಟಿತರಾಗಬೇಕಿದೆ ಎಂದರು.
ರಾಜ್ಯ ಸಂಘದ ಖಜಾಂಚಿ ಪ್ರಸನ್ನಗೌಡ ತಗ್ಗಳ್ಳಿ ಮಾತನಾಡಿ, ಕಬ್ಬು ಹಾಗೂ ಹಾಲಿಗೆ ವೈಜ್ಞಾನಿಕ ದರ ನಿಗದಿ ಮಾಡಬೇಕೆಂದು ಆಗ್ರಹಿಸಿ ಮಂಡ್ಯ ನಗರದಲ್ಲಿ ನಿರಂತರವಾಗಿ ಅಹೋರಾತ್ರಿ ಧರಣಿ ನಡೆಯುತ್ತಿದೆ. ಆದರೆ ಸರ್ಕಾರದ ವತಿಯಿಂದ ಬಂದು ರೈತರ ಕಷ್ಟಗಳನ್ನು ಕೇಳಲಿಲ್ಲ. ಇಂತಹ ದಪ್ಪ ಚರ್ಮದ ಸರ್ಕಾರವನ್ನು ಬಡಿದೆಚ್ಚರಿಸಲು ರೈತ ಸಂಘಟನೆ ಬೃಹದಾಕಾರವಾಗಿ ಬೆಳೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.
ಶ್ರೀರಂಗಪಟ್ಟಣ ಮುಖಂಡ ಪಾಂಡು ಮಾತನಾಡಿ, ಎಲ್ಲ ವರ್ಗದ ಕೂಲಿ ಕಾರ್ಮಿಕರು ಒಂದೊಂದು ಸಂಘಟನೆ ಮಾಡಿಕೊಂಡು ಸಂಘಟನಾತ್ಮಕವಾಗಿ ತಮ್ಮ ಹಿತ ಕಾಯ್ದುಕೊಂಡು ಹೋಗುತ್ತಿದ್ದಾರೆ. ಅದೇ ರೀತಿ ನಮ್ಮ ರೈತ ಸಮುದಾಯವು ಸಹ ಸಂಘಟನಾತ್ಮಕವಾಗಿ ಬಲಗೊಂಡರೆ ಶೋಷಣೆಯ ವಿರುದ್ಧ ನಿರಂತರವಾಗಿ ದನಿ ಎತ್ತಬಹುದು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗಪ್ಪಾಜಿ, ಖಜಾಂಚಿ ಶೆಟ್ಟಳ್ಳಿ ರವಿಕುಮಾರ್, ಕಾರ್ಯದರ್ಶಿ ಮಾರಗೌಡನಹಳ್ಳಿ ನಿಂಗೇಗೌಡ, ಚನ್ನೇಶ್, ಕಿಟ್ಟಿ, ಪಂಚಲಿಂಗೇಗೌಡ, ಪುಷ್ಪಾ ಸತೀಸ್, ಸುದರ್ಶನ್ ಇತರರಿದ್ದರು.
ಇದೇ ವೇಳೆ ಗ್ರಾಮದಲ್ಲಿ 60ಕ್ಕೂ ಹೆಚ್ಚು ರೈತರು, ಕೃಷಿ ಕೂಲಿ ಕಾರ್ಮಿಕರು ಹಾಗೂ ರೈತ ಮಹಿಳೆಯರು ಹಸಿರು ಟವಲ್ ಹಾಕಿಕೊಳ್ಳುವುದರ ಮುಖಾಂತರ ರೈತ ಸಂಘಗೆ ಸೇರ್ಪಡೆಯಾದರು.