ಮಂಡ್ಯ: ಪ್ರತಿ ಟನ್ ಕಬ್ಬಿಗೆ 4,500 ರೂ. ನಿಗದಿಗೊಳಿಸಬೇಕೆಂದು ರೈತ ಸಂಘದಿಂದ ನೀಡಿದ ಗಡುವು ಸಮೀಪಿಸುತ್ತಿದ್ದರೂ ರಾಜ್ಯ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಅ.5ರಂದು ಮಂಡ್ಯ ಮತ್ತು ಮೈಸೂರು ಜಿಲ್ಲೆ ಪ್ರವೇಶಿಸುವ ಹೆದ್ದಾರಿ ಸಂಚಾರ ಬಂದ್‌ಗೆ ತೀರ್ಮಾನಿಸಲಾಗಿದೆ.
ದರ ನಿಗದಿ ಸಂಬಂಧ ಕೆಲ ದಿನದ ಹಿಂದೆ ರೈತ ಸಂಘದಿಂದ ಹಕ್ಕೊತ್ತಾಯ ಸಮಾವೇಶ ಮಾಡಿ ಸರ್ಕಾರಕ್ಕೆ ಒತ್ತಾಯಿಸಲಾಗಿತ್ತು. ಇದರ ಅಂಗವಾಗಿ ‘ಪೇ ಾರ್ಮರ್’ ಅಭಿಯಾನ ಕೂಡ ಮಾಡಲಾಗಿತ್ತು. ಈ ನಡುವೆ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಭಾನುವಾರ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಕರ್ನಾಟಕ ಸಂಘದಲ್ಲಿ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಕರ್ನಾಟಕ ಸಂಘದಲ್ಲಿಯೇ ಆಯೋಜನೆಗೊಂಡಿದ್ದ ಮತ್ತೊಂದು ಕಾರ್ಯಕ್ರಮಕ್ಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಆಗಮಿಸಿದ್ದರು. ಈ ಸಂದರ್ಭದಲ್ಲಿ ರೈತ ಸಂಘದಿಂದ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಬೇಡಿಕೆ ಈಡೇರಿಕೆಗೆ ಸಂಬಂಧ ಮುಖ್ಯಮಂತ್ರಿ ಅವರೊಂದಿಗೆ ಮಾತನಾಡಲಾಗುವುದು. ದಸರಾ ಹಬ್ಬಕ್ಕೆ ತೊಂದರೆಯಾಗುವುದು ಬೇಡ ಎಂದು ಸಚಿವರು ಮನವೊಲಿಕೆ ಯತ್ನ ನಡೆಸಿದರಾದರೂ ಸಂಘಟನೆಯವರು ಒಪ್ಪಲಿಲ್ಲ. ಈ ಹಿನ್ನೆಲೆಯಲ್ಲಿ ಮಾತುಕತೆ ಮುರಿದುಬಿದ್ದು ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿದರು.
ಸರ್ಕಾರಕ್ಕೆ ಮನವಿ ನೀಡಿ ಎಚ್ಚರಿಕೆ ಕೊಟ್ಟಿದ್ದರೂ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತ ವಿರೋಧಿ ಧೋರಣೆ ಖಂಡಿಸಿ ಮಂಡ್ಯ ಮತ್ತು ಮೈಸೂರು ಭಾಗದ ಎಂಟು ಕಡೆ ಅ.5ರಂದು ಹೆದ್ದಾರಿ ಸಂಚಾರ ತಡೆ ನಡೆಸಲಾಗುವುದು. ಅಂದು ಮದ್ದೂರು, ಕೆ.ಆರ್.ಪೇಟೆ, ಮಳವಳ್ಳಿ, ಶ್ರೀರಂಗಪಟ್ಟಣ, ಮೈಸೂರಿನ ಇಲವಾಲ, ಟಿ.ನರಸೀಪುರ, ನಂಜನಗೂಡು ಮತ್ತು ಹುಣಸೂರಿನಲ್ಲಿ ಹಸು, ಎತ್ತಿನಗಾಡಿ, ಟ್ರ್ಯಾಕ್ಟರ್‌ನೊಂದಿಗೆ ಪ್ರತಿಭಟನೆ ನಡೆಸಲಾಗುವುದು. ಜೈಲಿಗೆ ಹೋದರೂ ಸರಿ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪ್ರತಿ ಟನ್ ಕಬ್ಬಿಗೆ 4,500 ರೂ. ನಿಗದಿಗೊಳಿಸಬೇಕು. ಪ್ರತಿ ಲೀಟರ್ ಹಾಲಿಗೆ 40 ರೂ. ಕೊಡಬೇಕು. ಕೆಆರ್‌ಎಸ್ ಅಣೆಕಟ್ಟೆಯ ವ್ಯಾಪ್ತಿಯಲ್ಲಿ ಶಾಶ್ವತವಾಗಿ ಗಣಿಗಾರಿಕೆ ನಿಷೇಧಿಸಬೇಕು. ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ಆದೇಶ ಹಿಂಪಡೆಯಬೇಕು. ಮನ್‌ಮುಲ್‌ನಲ್ಲಿ ನಡೆಯುತ್ತಿರುವ ನೇಮಕಾತಿಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ರಾಜ್ಯ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್, ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಪ್ರಸನ್ನ ಎನ್.ಗೌಡ, ತಗ್ಗಹಳ್ಳಿ ಪ್ರಸನ್ನ, ಲಿಂಗಪ್ಪಾಜಿ, ಶಿವಳ್ಳಿ ಚಂದ್ರು ಇತರರಿದ್ದರು.