ಮಂಡ್ಯ: ಎರಡು ರಾಷ್ಟ್ರೀಯ ಪಕ್ಷಗಳನ್ನು ಗಮನಿಸಿದರೆ ಅವರಿಗೆ ರೈತರ ಬಗ್ಗೆ ಯಾವುದೇ ಹಿತಾಸಕ್ತಿ ಇಲ್ಲ. ಕಾಂಗ್ರೆಸ್‌ನವರು ಬಜರಂಗದಳ ಹಾಗೂ ಬಿಜೆಪಿಯವರು ಪಿಎಫ್‌ಐ ಬಗ್ಗೆ ಮಾತನಾಡುವುದನ್ನೇ ರಾಜಕೀಯ ಅಜೆಂಡವಾಗಿಸಿಕೊಂಡಿದ್ದಾರೆಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ವಾಗ್ದಾಳಿ ನಡೆಸಿದರು.
ನಗರದ ಹೊಸಹಳ್ಳಿ ಬಡಾವಣೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಎಸ್.ಸಿ.ಮಧುಚಂದನ್ ಪರ ಮತಯಾಚನೆ ಮಾಡಿದ ಅವರು, ರೈತರ ಕಷ್ಟಗಳಿಗೆ ಸ್ಪಂದಿಸುವ ಮಾತನ್ನು ಯಾರು ಆಡುವುದಿಲ್ಲ. ಅವರಿಗೆ ಅದು ಬೇಕಾಗಿಯೂ ಇಲ್ಲ. ಪ್ರತಿ ರೈತರು ಹಾಗೂ ಅವರ ಮಕ್ಕಳು ಇದನ್ನ ಆಲೋಚಿಸಿ ಮತ ನೀಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ ಎಂದರು.
ಇಷ್ಟು ದಿನ ಅವ ನಮ್ಮ ಜಾತಿಯವನು ಎಂದುಕೊಂಡು ಒಂದು ಪಕ್ಷಕ್ಕೆ ನಿರಂತರವಾಗಿ ಅಧಿಕಾರ ಕೊಟ್ಟಿದ್ದೀರಿ. ಆದರೆ ಇಂದು ಮಂಡ್ಯ ಜಿಲ್ಲಾಕೇಂದ್ರ ಅವ್ಯವಸ್ಥೆಗಳಿಂದ ಕೂಡಿದ್ದು, ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಒಬ್ಬರು ಸಹ ಮುಂದಾಗದಿಲ್ಲ. ಎಚ್.ಡಿ.ಕುಮಾರಸ್ವಾಮಿ ಅವರಿಗೆ ಎರಡು ಸಲ ಮುಖ್ಯಮಂತ್ರಿಯಾಗುವ ಅವಕಾಶ ದೊರೆತರೂ ಸಹ ಮಂಡ್ಯವನ್ನು ಕಡೆಗಣನೆ ಮಾಡಿರುವುದು ಸ್ಪಷ್ಟವಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಎಸ್.ಸಿ.ಮಧುಚಂದನ್ ಮಾತನಾಡಿ, ಮಿಮ್ಸ್ ಆಸ್ಪತ್ರೆಯಲ್ಲಿ ನಿತ್ಯವೂ ಬರುವ ಸಾವಿರಾರು ರೋಗಗಳಿಗೆ ಆಗುತ್ತಿರುವ ಅನಾನುಕೂಲ ಹೇಳತೀರದಾಗಿದೆ. ಆದ್ದರಿಂದ ಈ ಸಮಸ್ಯೆಗಳ ಪರಿಹಾರಕ್ಕಾಗಿ ನನ್ನದೇ ಆದ ಯೋಜನೆ ರೂಪಿಸಿಕೊಂಡಿದ್ದೇನೆ. ಅದಕ್ಕೆ ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದು ಮನವಿ ಮಾಡಿಕೊಂಡರು.