ಮಂಡ್ಯ: ಚುನಾವಣೆಯಲ್ಲಿ ಕೋಟ್ಯಂತರ ರೂ ಖರ್ಚು ಮಾಡಿ ಗೆಲುವು ಸಾಧಿಸಿದವರು ಬಳಿಕ ನೂರು ಪಟ್ಟು ಹೆಚ್ಚು ಆಸ್ತಿ ಮಾಡಿಕೊಳ್ಳುತ್ತಾರೆ. ಆದ್ದರಿಂದ ರೈತರು ಹಾಗೂ ಬಡವರ ಪರವಾಗಿ ಕೆಲಸ ಮಾಡುವಂತಹ ವ್ಯಕ್ತಿಗಳನ್ನು ಆಯ್ಕೆ ಮಾಡಿ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ತಾಲೂಕಿನ ಎಸ್.ಐ.ಕೋಡಿಹಳ್ಳಿ, ಕೊಮ್ಮೇರಹಳ್ಳಿ, ಹೊನಗಾನಹಳ್ಳಿ, ಎಚ್.ಕೋಡಿಹಳ್ಳಿ, ಕೋಣನಹಳ್ಳಿ, ಗೋಪಾಲಪುರ ಗ್ರಾಮದಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಎಸ್.ಸಿ.ಮಧುಚಂದನ್ ಪರ ಮತಯಾಚಿಸಿದರು. ಹಣ ಕೊಟ್ಟು ಗೆಲುವು ಸಾಧಿಸಿದ ವ್ಯಕ್ತಿ ತಮ್ಮ ಮಕ್ಕಳು, ಮೊಮ್ಮಕ್ಕಳು ಹಾಗೂ ಸಂಬಂಧಿಕರನ್ನು ಬೆಳೆಸುವ ಕಡೆ ಹೋಗುತ್ತಾನೆ. ಇನ್ನೆಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದು ಎಲ್ಲಿ ಕಂಡುಬರುತ್ತದೆ. ಇಂತ ಆಡಳಿತವನ್ನೊಳಗೊಂಡಂತೆ ಯಾವುದೇ ತಾಲೂಕು ಕಚೇರಿ, ಗ್ರಾಮ ಪಂಚಾಯಿತಿಗೆ ಹೋದರೂ ಕೆಲಸವಾಗುವುದಿಲ್ಲ. ಅದನ್ನು ತಪ್ಪಿಸಲು ರೈತಪರ ಹೋರಾಟಗಾರ ಮಧುಚಂದನ್ ಅವರಿಗೆ ನಿಮ್ಮ ಮತ ನೀಡಿ ಎಂದು ಮನವಿ ಮಾಡಿದರು.
ಅಭ್ಯರ್ಥಿ ಎಸ್.ಸಿ.ಮಧುಚಂದನ್, ಸಾತನೂರು ವಿಶ್ವ, ಶೋಭರಾಜ್, ನಾಗಣ್ಣ, ಕೊಮ್ಮೇರಹಳ್ಳಿ ಅಶೋಕ್, ಸಂತೋಷ್, ಲೋಹಿತ್, ನಂದೀಶ್, ಕೆ.ರಾಮು, ಸೋಮಶೇಖರ್, ಸುರೇಶ್, ಯೋಗಾನಂದ, ಕೋಣನಹಳ್ಳಿ ಮಂಜು ಇತರರಿದ್ದರು.