ಮಂಡ್ಯ: ಮನ್‌ಮುಲ್‌ನಲ್ಲಿ ನಡೆಯುತ್ತಿದ್ದ ಅಕ್ರಮಗಳ ವಿರುದ್ಧ ನಿರಂತರವಾಗಿ ಹೋರಾಟ ಮಾಡಿದ್ದೇನೆ. ರಾಜಕೀಯದ ಹೊಸ ಮನ್ವಂತರದೆಡೆಗೆ ಕೊಂಡೊಯ್ಯಲು ರಾಜಕಾರಣಕ್ಕೆ ಬಂದಿದ್ದೇನೆ. ಎಲ್ಲರೂ ಬೆಂಬಲಿಸುವಂತೆ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಎಸ್.ಸಿ.ಮಧುಚಂದನ್ ಮನವಿ ಮಾಡಿದರು.
ತಾಲೂಕಿನ ಬಿ.ಹೊಸೂರು ಗ್ರಾಮದಲ್ಲಿ ಶುಕ್ರವಾರ ರೈತ ಸಂಘದ ಗ್ರಾಮಘಟಕ ಉದ್ಘಾಟಿಸಿ ಮಾತನಾಡಿದರು. ಹಾಲಿಗೆ ವೈಜ್ಞಾನಿಕ ಬೆಲೆ ಕೊಡಿಸಲು, ಭತ್ತ ಮತ್ತು ಕಬ್ಬು, ರಾಗಿ ಬೆಳೆಗೆ ಬೆಂಬಲ ಬೆಲೆ ಘೋಷಿಸಬೇಕೆಂದು ನಿರಂತರವಾಗಿ ಹೋರಾಟ ಮಾಡಿದ್ದೇನೆ. ಚುನಾವಣೆ ಹತ್ತಿರ ಬಂದಾಗ ಹಿಂದಿನ ದಿನ ರಾತ್ರಿ ಬಂದು ದುಡ್ಡು ಹಂಚುವವರಲ್ಲ. ನಿಮ್ಮೊಡನಿದ್ದು ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಲು ಹೋರಾಟ ಮಾಡುತ್ತೇನೆ ಎಂದರು.
ಮನ್‌ಮುಲ್ ನೇಮಕಾತಿಯಲ್ಲಿ ನಡೆದ ಅಕ್ರಮ ಹಾಗೂ ಇಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಹೋರಾಡಿ ಭ್ರಷ್ಟರನ್ನು ಬಯಲು ಅವರು ಕೊಳ್ಳೆ ಹೊಡೆದಿರುವ ಜಿಲ್ಲೆಯ ಹಾಲು ಉತ್ಪಾದಕರ ಹಣವನ್ನು ಹಿಂದಿರುಗಿಸಬೇಕೆಂದು ಒತ್ತಾಯಿಸುತ್ತಿದ್ದೇವೆ. ಯಾವುದೇ ಆಮಿಷಕ್ಕೆ ಒಳಗಾಗಬೇಡಿ. ನ್ಯಾಯವಾದ ರೀತಿ ಜನರಿಗೆ ಬರಬೇಕಿರುವ ಸೌಲಭ್ಯಗಳನ್ನು ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದರು.
ಬಿ.ಹೊಸೂರಿನ ರೈತ ಮುಖಂಡ ವಿಜಯ್‌ಕುಮಾರ್ ಮಾತನಾಡಿ, ಇಂದು ರಾಜಕಾರಣಿಗಳು ಜನರನ್ನು ಹಣ ಕೊಟ್ಟು ಕೊಂಡುಕೊಳ್ಳಲು ತೀರ್ಮಾನ ಮಾಡಿದ್ದಾರೆ. ಅಧಿಕಾರವಿದ್ದಾಗ ಯಾವುದೇ ಕೆಲಸ ಮಾಡದೆ ಚುನಾವಣೆಗಳು ಬಂದಾಗ ಹಣ, ಹೆಂಡ ಹಂಚಿ ವಿಧಾನಸಭೆಗೆ ಆಯ್ಕೆಯಾಗುತ್ತಿರುವುದು ಸೋಜಿಗದ ಸಂಗತಿ. ಮೊದಲು ನಾವು ಎಚ್ಚೆತ್ತುಕೊಳ್ಳಬೇಕು. ವಿಧಾನಸಭೆಗೆ ಮಧುಚಂದನ್ ಅವರಂತಹ ಹೋರಾಟಗಾರರನ್ನು ಆಯ್ಕೆ ಮಾಡಬೇಕು ಎಂದರು.
ಆರ್ಗ್ಯಾನಿಕ್ ಮಂಡ್ಯ ಸಹ ಸಂಸ್ಥಾಪಕ ಉಮೇಶ್, ಕಾಳೇಗೌಡ, ಮಂಚೇಗೌಡ, ಅಂಗಡಿ ಶೇಖರ್, ರವಿಕುಮಾರ್, ಚೇತನ್ ಕುಮಾರ್, ಹೊನ್ನೇಗೌಡ ಇತರರಿದ್ದರು.
ಇದೇ ವೇಳೆ 60ಕ್ಕೂ ಹೆಚ್ಚಿನ ಯುವಕರು ಹಾಗೂ ಹಿರಿಯರು ಅನ್ಯ ಪಕ್ಷಗಳನ್ನು ತೊರೆದು ಹಸಿರು ಶಾಲು ಹಾಕಿಕೊಳ್ಳುವ ಮೂಲಕ ರೈತ ಸಂಘಕ್ಕೆ ಸೇರ್ಪಡೆಗೊಂಡರು.