ಜಿಲ್ಲೆ

ಮಂಡ್ಯ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಿ: ರೈತ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

ಮಂಡ್ಯ: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನಿರಂತರ ನೀರು ಹರಿಸಿದ ಪರಿಣಾಮ ಬೆಳೆಗಳಿಗೆ ನೀರಿನ ಕೊರತೆ ಎದುರಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸುವಂತೆ ರೈತ ಸಂಘ (ಮೂಲ ಸಂಘಟನೆ) ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.

ರೈತ ಸಂಘದ ಮುಖಂಡರು ಮಂಗಳವಾರ ಜಿಲ್ಲಾಧಿಕಾರಿ ಡಾ.ಕುಮಾರ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ, ತಮಿಳುನಾಡಿಗೆ ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂದು ಸೂಚಿಸಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಅವೈಜ್ಞಾನಿಕವಾಗಿದೆ. ಕೆಆರ್‌ಎಸ್ ಅಣೆಕಟ್ಟೆಯಲ್ಲಿ 113 ಅಡಿ ನೀರು ಶೇಖರಣಿಯಾಗಿದ್ದಾಗ ನೀರಾವರಿ ಸಲಹಾ ಸಮಿತಿಯ ತೀರ್ಮಾನದಂತೆ ಕಾವೇರಿ ಜಲಾನಯನ ಪ್ರದೇಶದ ನಾಲೆಗಳಿಗೆ ಕಟ್ಟು ಪದ್ಧತಿಯಲ್ಲಿ ಬೆಳೆಗಳಗೆ ನೀರು ಹರಿಸುವ ಬಗ್ಗೆ ತೀರ್ಮಾನಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರ ಕಾವೇರಿ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ದಿನಕ್ಕೆ 15 ಸಾವಿರ ಕ್ಯೂಸೆಕ್ ನೀರನ್ನು ಹರಿಸಿದ ಪರಿಣಾಮ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದೀಗ ಮತ್ತೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಹೇಳಿರುವುದು ಸರಿಯಲ್ಲ. ಇದರ ಪರಿಣಾಮ ಕಾವೇರಿ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ನೀರಿನ ಕೊರತೆ ಉಂಟಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದೇವೆ ಎಂದರು.

ಇಂತಹ ಸಂಕಷ್ಟ ಸನ್ನಿವೇಶದಲ್ಲಿ ಜಿಲ್ಲೆಯ ಮಳೆ ಆಶ್ರಿತ ಮತ್ತು ನೀರಾವರಿ ಪ್ರದೇಶದ ಸಮಾನಾಂತರ ತೀರ್ಮಾನದ ಪ್ರಕಾರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸಬೇಕೆಂದು ಒತ್ತಾಯಿಸಿದರು. ಅದೇ ರೀತಿ ಬೆಳೆಗಳಿಗೆ ಸೂಕ್ತ ಪರಿಹಾರ ಘೋಷಿಸಬೇಕೆಂದು ಮನವಿ ಮಾಡಿದರು

ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಗೌರವಾಧ್ಯಕ್ಷ ಬೋರಾಪುರ ಶಂಕರೇಗೌಡ, ಪ್ರಧಾನ ಕಾರ್ಯದರ್ಶಿ ಎಸ್. ಮಂಜೇಶ್‌ಗೌಡ, ರಾಮಲಿಂಗೇಗೌಡ, ವೈ.ಕೆ. ರಾಮೇಗೌಡ, ಬೋರಲಿಂಗೇಗೌಡ, ಸೋ.ಸಿ.ಪ್ರಕಾಶ್, ಇಂಡುವಾಳು ಬಸವರಾಜು ಇತರರಿದ್ದರು.