ಮಂಡ್ಯ: ಪ್ರತಿ ಟನ್ ಕಬ್ಬಿಗೆ 4500 ರೂ ಹಾಗೂ ಪ್ರತಿ ಲೀಟರ್ ಹಾಲಿಗೆ 40 ರೂ ನಿಗದಿ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ನಗರದ ಸರ್‌ಎಂವಿ ಪ್ರತಿಮೆ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಆಗಮಿಸಿ ರೈತರ ಮನವಿ ಆಲಿಸಿದರು.
ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಡೆಸುತ್ತಿರುವ ಧರಣಿ ಶನಿವಾರ 27ನೇ ದಿನ ಪೂರೈಸಿತು. ಆದರೆ ಇಷ್ಟು ದಿನದವರೆಗೆ ಕೆ.ಗೋಪಾಲಯ್ಯ ಅವರು ಸ್ಥಳಕ್ಕೆ ಬಂದು ರೈತರ ಮನವಿ ಸ್ವೀಕರಿಸದಿರುವ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ ಸೇರಿದಂತೆ ಹಲವರು ಭೇಟಿ ನೀಡಿ ಬೆಂಬಲ ಸೂಚಿಸಿದರು. ಇತ್ತ ಸಚಿವರಾದ ಆರಗ ಜ್ಞಾನೇಂದ್ರ ಹಾಗೂ ಕೆ.ಸಿ.ನಾರಾಯಣಗೌಡ ಪ್ರತಿಭಟನೆ ನಡೆಯುತ್ತಿದ್ದ ಮಾರ್ಗದಲ್ಲಿ ಸಂಚರಿಸಿದರೂ ಆಗಮಿಸಿರಲಿಲ್ಲ. ಇದು ಆಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದ ಎಚ್ಚೆತ್ತ ಕೆಸಿಎನ್ ಪ್ರತಿಭಟನಾಕಾರರನ್ನು ಭೇಟಿಯಾಗಿ ಧರಣಿ ಹಿಂಪಡೆಯುವಂತೆ ಮಾಡಿದರೂ ಪ್ರಯೋಜನವಾಗಿರಲಿಲ್ಲ.
ಇಷ್ಟೆಲ್ಲ ಬೆಳವಣಿಗೆ ನಡೆದರೂ ಸಚಿವ ಕೆ.ಗೋಪಾಲಯ್ಯ ಅವರು ಮಾತ್ರ ಪ್ರತಿಭಟನಾಕಾರರೊಂದಿಗೆ ಒಮ್ಮೆಯೂ ಮಾತುಕತೆಗೆ ಬಾರದಿರುವ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಮಾತ್ರವಲ್ಲದೆ ಸಚಿವರು ನಾಪತ್ತೆಯಾಗಿದ್ದಾರೆಂದು ಫ್ಲೆಕ್ಸ್‌ಗಳೊಂದಿಗೆ ಪ್ರತಿಭಟನೆ ನಡೆಸಿದರು. ಈ ಎಲ್ಲದರ ನಡುವೆ ಧರಣಿ ಸ್ಥಳಕ್ಕೆ ಆಗಮಿಸಿ ಮಾತುಕತೆ ನಡೆಸಿದರು. ಮಾತ್ರವಲ್ಲದೆ ಕಾರ್ಯಕರ್ತರೊಂದಿಗೆ ಊಟ ಮಾಡುವುದರ ಜತೆಗೆ ಮನವೊಲಿಕೆ ಮಾಡಿ ಧರಣಿ ಹಿಂಪಡೆಯುವಂತೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಬೇಡಿಕೆ ಈಡೇರುವವರೆಗೂ ಹಿಂಪಡೆಯುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟವಾಗಿ ಹೇಳಿದರು.
ಅಕ್ಕಿಗಿರಣಿ ಮಾಲೀಕರ ಬೆಂಬಲ: 27ನೇ ದಿನದ ಚಳವಳಿಗೆ ಬೆಂಬಲ ಸೂಚಿಸಿ ಜಿಲ್ಲಾ ಮತ್ತು ತಾಲೂಕು ಅಕ್ಕಿ ಗಿರಣಿ ಮಾಲೀಕರ ಸಂಘ ಹಾಗೂ ಮಂಡ್ಯ ತಾಲೂಕಿನ ಚಿಕ್ಕಬಾಣಸವಾಡಿ, ತಂಡಸನಹಳ್ಳಿ, ಕೋಟನಹಳ್ಳಿ ತಿಟ್ಟು ಗ್ರಾಮದ ರೈತರು ಭಾಗವಹಿಸಿದರು.
ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ರಮೇಶ್, ಕಾರ್ಯದರ್ಶಿ ಮಹೇಶ್‌ಕುಮಾರ್, ಖಜಾಂಚಿ ಉದಯಕುಮಾರ್, ಮಂಡ್ಯ ತಾಲೂಕು ಅಧ್ಯಕ್ಷ ಆತ್ಮನಂದ, ವೇಣುಗೋಪಾಲ್, ದೀಪಕ್, ಅರುಣಕುಮಾರ್, ರಾಮಕೃಷ್ಣೇಗೌಡ, ಕುಮಾರ್, ದೀಲಿಪ್‌ಕುಮಾರ್, ಶ್ರೀನಿವಾಸ್, ಮಲ್ಲಿಕಾರ್ಜುನ, ಶಂಕರೇಗೌಡ ಇತರರಿದ್ದರು.
8ರಂದು ಕ್ಯಾಬಿನೆಟ್ ಸಭೆ: ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ಎಫ್‌ಆರ್‌ಪಿ ದರ ನಿಗದಿಯನ್ನು ಕೇಂದ್ರ ಸರ್ಕಾರ ಮಾಡಬೇಕು. ಇದು ಎಲ್ಲ ರಾಜ್ಯಕ್ಕೂ ಅನ್ವಯವಾಗುತ್ತದೆ. ಇನ್ನು ರಾಜ್ಯಕ್ಕೆ ಸಂಬಂಧಿಸಿದಂತೆ ಸಕ್ಕರೆ ಕಾರ್ಖಾನೆ ಮಾಲೀಕರು ತಮಗೆ ಬರುವ ಲಾಭಾಂಶದಲ್ಲಿ ರೈತರಿಗೆ ಪಾಲು ನೀಡುವ ಸಂಬಂಧ ಚರ್ಚೆ ಮಾಡಲಾಗಿತ್ತು. ಆದರೆ ಈ ಬಗ್ಗೆ ಕೆಲ ಮಾಲೀಕರು ನ್ಯಾಯಾಲಯಕ್ಕೆ ಹೋಗಿ ತಡಯಾಜ್ಞೆ ತಂದಿದ್ದಾರೆ. ಈ ಸಂಬಂಧ ಲಾಭಾಂಶದಲ್ಲಿ ದರ ನಿಗದಿ ಮಾಡಿದಂತೆ ಸರ್ಕಾರಕ್ಕೆ ಸೂಚನೆ ಬಂದಿದೆ. ಡಿ.6ರಂದು ವಿಚಾರಣೆ ನಡೆಯಲಿದೆ ಎಂದು ಹೇಳಿದರು.
ಇನ್ನು ಇತ್ತೀಚೆಗೆ ನಂಜನಗೂಡಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಬಂದಾಗ ರೈತ ಮುಖಂಡರೊಂದಿಗೆ ಚರ್ಚೆ ನಡೆಸಿದ್ದಾರೆ. ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಮಂಡ್ಯದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಕುರಿತು ಸಿಎಂ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ರೈತರು ಕುಟುಂಬವನ್ನು ಬಿಟ್ಟು ಹಗಲುರಾತ್ರಿ ಎನ್ನದೇ ಧರಣಿ ನಡೆಸುತ್ತಿದ್ದಾರೆ. ಸಮಸ್ಯೆ ಬಗೆಹರಿಸಲು ಕ್ರಮ ವಹಿಸುವಂತೆ ಮನವಿ ಮಾಡಲಾಗಿದೆ. ಈ ಸಂಬಂಧ ಡಿ.8ರಂದು ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಸಿದ್ದರಾಮಯ್ಯ ಇದ್ದರು.