ಜಿಲ್ಲೆ

ರೈತರ ಹೋರಾಟಕ್ಕೆ ಮಹಿಳೆಯರ ಬಲ: ರಾಜ್ಯಸರ್ಕಾರದ ವಿರುದ್ಧ ಆಕ್ರೋಶ

reportermys

ಮಂಡ್ಯ: ಕಬ್ಬು ಹಾಗೂ ಹಾಲಿಗೆ ವೈಜ್ಞಾನಿಕ ದರ ನಿಗದಿಪಡಿಸಬೇಕೆಂದು ಒತ್ತಾಯಿಸಿ ನಗರದ ಸರ್‌ಎಂವಿ ಪ್ರತಿಮೆ ಎದುರು ನಡೆಸುತ್ತಿರುವ ರೈತ ಸಂಘದ ಧರಣಿ ಮಂಗಳವಾರ 16ನೇ ದಿನ ಪೂರೈಸಿದೆ. ಹೋರಾಟಕ್ಕೆ ಬೆಂಬಲ ಸೂಚಿಸಿ ವಿವಿಧ ಸಂಘಟನೆಯ ಮಹಿಳೆಯರು ಭಾಗವಹಿಸಿದರು.
ಹಾಲಿನ ಕ್ಯಾನ್‌ಗಳೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಹಿಳೆಯರು, ನ್ಯಾಯಯುತ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಡೆಯುತ್ತಿರುವ ಧರಣಿಗೆ ಸರ್ಕಾರ ಸ್ಪಂದಿಸದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಪ್ರಸ್ತುತ ಕೃಷಿಯಿಂದ ರೈತರು ಲಾಭ ಕಾಣಲು ಸಾಧ್ಯವಾಗುತ್ತಿಲ್ಲ. ಅತಿವೃಷ್ಟಿ, ಅನಾವೃಷ್ಟಿ, ಬೆಲೆ ಇಳಿಕೆ, ದಲ್ಲಾಳಿಗಳ ಮೋಸದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿಗೆ ಹಾಕಿದ ಬಂಡವಾಳವೂ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಯಾವುದೇ ಸರ್ಕಾರ ಬಂದರೂ ಜನಪ್ರತಿನಿಧಿಗಳು ರೈತರ ಹೆಸರೇಳಿಕೊಂಡು ಪ್ರಮಾಣ ವಚನ ಸ್ವೀಕರಿಸುತ್ತಾರೆ. ಜತೆಗೆ ಚುನಾವಣೆಗೂ ಮುನ್ನ ಇನ್ನಿಲ್ಲದ ಆಮಿಷವನ್ನು ಒಡ್ಡುತ್ತಾರೆ. ಆದರೆ, ಅಧಿಕಾರಕ್ಕೆ ಬಂದ ನಂತರ ರೈತರ ಬಗ್ಗೆ ಕನಿಷ್ಠ ಕಾಳಜಿ ತೋರುವುದಿಲ್ಲ. ದಿನಬಳಕೆ ವಸ್ತುಗಳ ಬೆಲೆ ಏರಿಕೆ, ಕೃಷಿಯಲ್ಲಿ ನಷ್ಟ ಕಂಡು ಯುವ ಸಮೂಹ ನಗರ, ಪಟ್ಟಣದತ್ತ ವಲಸೆ ಹೋಗುತ್ತಿದೆ. ಇದಕ್ಕೆ ಕಾರಣ ಸರ್ಕಾರಗಳ ಅವೈಜ್ಞಾನಿಕ ನೀತಿಗಳೇ ಆಗಿವೆ. ಕಷ್ಟಪಟ್ಟು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದಿದ್ದರೆ ರೈತರು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಬಹುತೇಕ ರೈತ ಕುಟುಂಬಕ್ಕೆ ಹೈನುಗಾರಿಕೆ ಜೀವನಾಧಾರವಾಗಿದೆ. ಎರಡು ಹಸು ಸಾಕಿಕೊಂಡು ಕುಟುಂಬದ ನಿರ್ವಹಣೆ ಮಾಡುತ್ತಿದ್ದಾರೆ. ಇದೀಗ ಅದಕ್ಕೂ ಕಂಟಕ ಎದುರಾಗಿದೆ. ಪಶು ಆಹಾರದ ಬೆಲೆ ಗಗನಕ್ಕೇರಿದೆ. ಆದರೆ, ರೈತರಿಗೆ ಕೊಡುವ ಹಾಲಿನ ದರ ಕಡಿಮೆ ಇದೆ. ಇದರಿಂದಾಗಿ ಹೈನುಗಾರಿಕೆ ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಟನ್ ಕಬ್ಬಿಗೆ 4,500 ರೂ. ಹಾಗೂ ಪ್ರತಿ ಲೀಟರ್ ಹಾಲಿಗೆ 40 ರೂ. ನಿಗದಿ ಮಾಡುವುದು ಅಗತ್ಯವಾಗಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಹೋರಾಟಕ್ಕೆ ಸ್ಪಂದಿಸುವುದರ ಜತೆಗೆ ಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಬೆಂಬಲ: ಹೋರಾಟ ಬೆಂಬಲಿಸಿ ಸಮರ್ಥನಾ ಮಹಿಳಾ ಸಂಘದ ನಾಗರೇವಕ್ಕ, ನಿರ್ಮಲಾ, ಶರ್ಮಿಳಾ, ಜಯಶೀಲಾ, ಭಾರತಿ, ಜಯಲಕ್ಷ್ಮೀ, ಸುನೀತಾ, ಶಶಿ, ವತ್ಸಲಾ, ಭವಾನಿ, ಬೂದನೂರು ಹಾಲು ಒಕ್ಕೂಟದ ಪುಷ್ಪಾ, ಸಾವಿತ್ರಮ್ಮ, ಸಾಕಮ್ಮ, ಪುಟ್ಟಮ್ಮ, ಮಹಿಳಾ ಮುನ್ನಡೆಯ ಶೀಲಾ, ಅಂಜಲಿ, ಕಟ್ಟೇದೊಡ್ಡಿ ಹಾಲು ಒಕ್ಕೂಟದ ರುಕ್ಮಿಣಿ, ಪೂರ್ಣಿಮಾ, ಪದ್ಮಮ್ಮ, ಸುನಂದಮ್ಮ ಇತರರು ಭಾಗವಹಿಸಿದ್ದರು.