ಜಿಲ್ಲೆ

ರೈತರ ಹೋರಾಟಕ್ಕೆ ಬೆಂಬಲ: ಧರಣಿಯಲ್ಲಿ ಮಹಿಮಾ ಪಟೇಲ್, ಮಧು ಬಂಗಾರಪ್ಪ ಭಾಗಿ

reportermys

ಮಂಡ್ಯ: ಕಬ್ಬು ಹಾಗೂ ಹಾಲಿಗೆ ದರ ನಿಗದಿ ಸಂಬಂಧ ರೈತ ಸಂಘದ ಕಾರ್ಯಕರ್ತರು ನಗರದ ಸರ್‌ಎಂವಿ ಪ್ರತಿಮೆ ಎದುರು ನಡೆಸುತ್ತಿರುವ ಧರಣಿ ಶುಕ್ರವಾರ ಐದನೇ ದಿನ ಪೂರೈಸಿತು.
ಧರಣಿಯಲ್ಲಿ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ.ಪಟೇಲ್ ಹಾಗೂ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ಭಾಗವಹಿಸಿ ರೈತರಿಗೆ ಬೆಂಬಲ ಸೂಚಿಸಿದರು. ರೈತರ ನ್ಯಾಯಯುತ ಬೇಡಿಕೆ ಈಡೇರಿಸುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷೃ ತೋರುತ್ತಿರುವುದು ಸರಿಯಲ್ಲ. ಬೇಡಿಕೆಯಂತೆ ಕಬ್ಬು ಹಾಗೂ ಹಾಲಿಗೆ ದರ ನಿಗದಿ ಮಾಡುವಂತೆ ಆಗ್ರಹಿಸಿದರು. ಕೊಡಗು ಜಿಲ್ಲೆ ಮತ್ತು ಶ್ರೀರಂಗಪಟ್ಟಣ ತಾಲೂಕಿನ ರೈತ ಮುಖಂಡರು ಧರಣಿಯಲ್ಲಿ ಭಾಗವಹಿಸಿ ಬೆಂಬಲ ನೀಡಿದರು.
ಡಿಸಿ ಮನವೊಲಿಕೆ ಯತ್ನ: ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ ಭೇಟಿ ನೀಡಿ ಧರಣಿ ಅಂತ್ಯಗೊಳಿಸುವಂತೆ ಮನವಿ ಮಾಡಿದರು. ಆದರೆ ಬೇಡಿಕೆ ಈಡೇರುವವರೆಗೂ ಧರಣಿ ಮುಂದುವರಿಸುವುದಾಗಿ ರೈತರು ಸ್ಪಷ್ಟಪಡಿಸಿದರು. ಜಿಲ್ಲಾಧಿಕಾರಿ ಮಾತನಾಡಿ, ಸಕ್ಕರೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರ್ಕಾರದ ಗಮನಕ್ಕೂ ಪ್ರತಿಭಟನೆಯ ವಿಷಯ ತಿಳಿಸಲಾಗಿದೆ. ಕಾಲಕಾಲಕ್ಕೆ ಮೌಖಿಕ ವರದಿ ನೀಡಲಾಗಿದೆ. ರೈತರ ಸಮಸ್ಯೆಗಳು ಅರ್ಥವಾಗುತ್ತಿದೆ. ನಾವು ಮತ್ತು ಜಿಲ್ಲಾಡಳಿತ ರೈತರ ಪರವಾಗಿ ಇರುತ್ತೇವೆ. ಇದರಲ್ಲಿ ಅನುಮಾನ ಬೇಡ, ಹಾಗಾಗಿ ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದರು.
ರೈತರು ಪ್ರತಿಭಟನೆ ಮಾಡುವ ವಿಷಯ ತಿಳಿದಿರಲಿಲ್ಲ, ಯಾವ ಕಾರಣಕ್ಕೆ ನೀವು ಪ್ರತಿಭಟನೆ ಮಾಡುತ್ತಿದ್ದೀರಿ ಎಂಬ ವಿಷಯ ಸಹ ನಮಗೆ ಗೊತ್ತಿರಲಿಲ್ಲ. ಈಗಾಗಲೇ ಐದು ದಿನದಿಂದ ಧರಣಿ ನಡೆಸುತ್ತಿದ್ದೀರಿ. ಮಳೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಿಲ್ಲಿಸಿ, ರೈತರ ಸಮಸ್ಯೆಗಳನ್ನು ಮುಖ್ಯಮಂತ್ರಿ ಅವರಿಗೆ ತಿಳಿಸುತ್ತೇನೆ ಎಂದು ಭರವಸೆ ನೀಡಿದರು. ಆದರೆ, ಮನವೊಲಿಕೆ ಯತ್ನ ವಿಫಲವಾಯಿತು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ರಾಜ್ಯ ಸರ್ಕಾರ ಪ್ರತಿ ಟನ್‌ಗೆ 4,500 ರೂ, ಎಸ್‌ಎಪಿ 500 ರೂ ಘೋಷಣೆ ಮಾಡಬೇಕು. ಪ್ರತಿ ಲೀಟರ್ ಹಾಲಿಗೆ 40 ರೂ. ನೀಡಬೇಕು ಎಂಬ ಹಲವು ಬೇಡಿಕೆಗಳನ್ನಿಟ್ಟುಕೊಂಡು ಪ್ರತಿಭಟನಾ ಸಮಾವೇಶ ಮಾಡಿದ್ದೇವೆ. ಆದರೂ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಜಿಲ್ಲಾಡಳಿತ ನಿದ್ರೆ ಮಾಡುತ್ತಿದೆ. ನ.16 ರಂದು ಜಾನುವಾರುಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಅಗತ್ಯವಿದ್ದರೆ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆ ನಡೆಸುತ್ತೇವೆ. ಪ್ರತಿ ಹಳ್ಳಿಯಿಂದಲೂ ಹೋರಾಟ ಮಾಡುತ್ತೇವೆ, ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ರೈತರ ಸಮಸ್ಯೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್, ರಾಜ್ಯ ಸಮಿತಿ ಸದಸ್ಯ ಅರಕೆರೆ ಪ್ರಸನ್ನ ಎನ್.ಗೌಡ, ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಕೊಡಗು ಜಿಲ್ಲೆ ಅಧ್ಯಕ್ಷ ಮನುಸೋಮಯ್ಯ, ಕಾರ್ಯಾಧ್ಯಕ್ಷ ಸುಜೇಯ್ ಬೋಪಯ್ಯ, ಮುಖಂಡರಾದ ಸುಬ್ಬಯ್ಯ, ಮಂಜುನಾಥ್, ಲಿಂಗಪ್ಪಾಜಿ, ಕೃಷ್ಣೇಗೌಡ, ಮಾದಪ್ಪ, ಬಾಲಕೃಷ್ಣ ಇತರರು ಭಾಗವಹಿಸಿದ್ದರು.