ಮಂಡ್ಯ: ಪ್ರತಿ ಟನ್ ಕಬ್ಬಿಗೆ 4500 ರೂ. ಹಾಗೂ ಪ್ರತಿ ಲೀ. ಹಾಲಿಗೆ 40 ರೂ. ನಿಗದಿಗೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಸರ್ ಎಂ.ವಿ ಪ್ರತಿಮೆ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಎರಡನೇ ದಿನ ಪೂರೈಸಿತು.
ಮಂಡ್ಯ ತಾಲೂಕಿನ ರೈತ ಸಂಘದ ಕಾರ್ಯಕರ್ತರು ಸೇರಿದಂತೆ ಇತರ ಸಂಘಟನೆ ಹಾಗೂ ರೈತರು ಧರಣಿಯಲ್ಲಿ ಪಾಲ್ಗೊಂಡರು. ರಾಜ್ಯ ಸರ್ಕಾರ ಕಬ್ಬಿಗೆ ಎಸ್‌ಎಪಿ ದರ ನಿಗದಿಪಡಿಸುವವರೆಗೂ ಅನಿರ್ದಿಷ್ಟಾವಧಿ ಚಳವಳಿ ಮುಂದುವರಿಯಲಿದೆ. ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿಯೂ ಕಬ್ಬಿನ ದರದ ಬಗ್ಗೆ ಮಾತನಾಡುತ್ತಿಲ್ಲ. ರೈತರ ಸಮಸ್ಯೆಗಳ ಬಗ್ಗೆ ಇವರಿಗೆ ಅರಿವಿಲ್ಲವೇ ಎಂದು ಜನಪ್ರತಿನಿಧಿಗಳ ವಿರುದ್ಧ ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬು ಹಾಗೂ ಹಾಲಿಗೆ ದರ ನಿಗದಿ ಮಾಡುವುದರ ಜತೆಗೆ ಹಳೇ ಬಾಕಿ ಪಾವತಿಸಬೇಕು. ಎಫ್‌ಆರ್‌ಪಿ ನಿಗದಿಗೆ 8.5 ಇಳುವರಿ ಮಾನದಂಡ ಮಾಡಬೇಕು. ಕೆಆರ್‌ಎಸ್ ಡ್ಯಾಂ ಸುತ್ತಮುತ್ತ 20 ಕಿ.ಮೀ ವ್ಯಾಪ್ತಿಯಲ್ಲಿ ಶಾಶ್ವತವಾಗಿ ಗಣಿಗಾರಿಕೆ ನಿಷೇಧ ಮಾಡಬೇಕು. ಕೇಂದ್ರ ಸರ್ಕಾರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತಂದು ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ಸರಬರಾಜನ್ನು ಖಾಸಗೀಕರಣ ಮಾಡುವುದನ್ನು ರದ್ದುಪಡಿಸಬೇಕು. ಇದನ್ನು ರಾಜ್ಯ ಸರ್ಕಾರ ವಿರೋಧಿಸಬೇಕು. ಇನ್ನು ಜಿಲ್ಲೆಯಲ್ಲಿ ರಸ್ತೆಗಳು ಗುಂಡಿ ಬಿದ್ದಿವೆ. ರಸ್ತೆ ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ಬೈಕ್ ರ‌್ಯಾಲಿ ನಡೆಸಿದ ಪರಿಣಾಮ ತಾತ್ಕಾಲಿಕವಾಗಿ ಗುಂಡಿಗಳನ್ನಷ್ಟೇ ಮುಚ್ಚುವ ಕೆಲಸವನ್ನು ನಗರಸಭೆ ಮಾಡುತ್ತಿದೆ. ಗ್ರಾಮೀಣ ಭಾಗದಲ್ಲಿಯೂ ರಸ್ತೆಗಳು ಹಾಳಾಗಿವೆ. ಅವುಗಳನ್ನು ದುರಸ್ತಿ ಮಾಡಿಸಿಕೊಡುವ ಕೆಲಸಕ್ಕೆ ಸಂಬಂಧಪಟ್ಟ ಇಲಾಖೆಗಳು ನಿರತರಾಗಬೇಕು ಎಂದು ಒತ್ತಾಯಿಸಿದರು.
ನೆರವು: ರೈತರೇ ವೈಯಕ್ತಿಕವಾಗಿ ಹಣ ಸಂಗ್ರಹಿಸಿ ಸ್ಥಳದಲ್ಲೇ ಅಡುಗೆ ಮಾಡಿ ಊಟ ಮಾಡುವ ಮೂಲಕ ಧರಣಿ ಮುಂದುವರಿಸಿದ್ದಾರೆ. ಅಂತೆಯೆ, ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಹಾಗೂ ಇತರರರು ಬೆಂಬಲ ಸೂಚಿಸಿ ಹಣದ ನೆರವು ನೀಡುತ್ತಿದ್ದಾರೆ. ಧರಣಿಯಲ್ಲಿ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್, ಪ್ರಸನ್ನ ಎನ್.ಗೌಡ, ಮರಿಚನ್ನೇಗೌಡ, ಚಂದ್ರಶೇಖರ್, ಪಿ.ಡಿ.ರಮೇಶ್ ಇತರರಿದ್ದರು.