ಜಿಲ್ಲೆ

ರೈತರಿಗೆ ಬೆಳೆ ಪರಿಹಾರ ವಿತರಿಸಿ: ನಗರದಲ್ಲಿ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕಾಗುತ್ತಿರುವ ಅನ್ಯಾಯ ವಿರೋಧಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ 12ನೇ ಸೋಮವಾರವು ಹೋರಾಟ ಮುಂದುವರೆಸಿತು.

ನಗರದ ಸರ್‌ಎಂವಿ ಪ್ರತಿಮೆ ಎದುರು ಸಮಿತಿಯ ಮುಖಂಡರು, ಪ್ರಗತಿಪರ, ಕನ್ನಡಪರ ಸಂಘಟನೆ ಕಾರ್ಯಕರ್ತರು ಹೋರಾಟ ನಡೆಸಿ ನೀರು ಸಂರಕ್ಷಣೆ ಮಾಡದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಕಾವೇರಿ ನದಿ ನೀರು ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ನಿರಂತರ ದ್ರೋಹ ಮಾಡುತ್ತಿವೆ. ನೀರಿನ ಸಂರಕ್ಷಣೆ ಮಾಡದೆ ರೈತರಿಗೆ ಸಂಕಷ್ಟ ತಂದೊಡ್ಡಿದೆ. ಭೀಕರ ಬರ ಪರಿಸ್ಥಿತಿಯಲ್ಲಿ ಬೆಳೆ ನಷ್ಟವಾಗಿ ಸಂಕಷ್ಟ ಪರಿಸ್ಥಿತಿಯಲ್ಲಿರುವ ರೈತರಿಗೆ ಬೆಳೆ ಪರಿಹಾರ ನೀಡಿಲ್ಲ. ಈ ಕೂಡಲೇ ರೈತರಿಗೆ ಬರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಮಳೆ ಅಭಾವದಿಂದ ನೀರಿನ ಕೊರತೆ ಎದುರಾಗಿ ಬೆಳೆಗಳೆಲ್ಲ ನೀರಿಲ್ಲದೆ ಒಣಗಿ ಹೋದವು. ಇದೀಗ ಜನ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ನಾಲೆ ಆಧುನೀಕರಣ ನೆಪಯೊಡ್ಡಿ ನೀರು ಬಿಡದಿರುವುದು ಸರಿಯಲ್ಲ. ಈ ತಕ್ಷಣ ಕಾಮಗಾರಿ ಸ್ಥಗಿತಗೊಳಿಸಿ ನಾಲೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ಮೂರು ರಾಜಕೀಯ ಪಕ್ಷಗಳು ಮಹಿಳೆಯರನ್ನು ವಸ್ತುವನ್ನಾಗಿ ನೋಡಿ ಕೀಳು ಮನೋಭಾವ ತೋರಿವೆ. ಮಹಿಳೆಯರನ್ನು ಅವಮಾನಿಸುವ ಕೆಲಸವನ್ನು ಚುನಾವಣೆ ವೇಳೆ ಮಾಡುತ್ತಿವೆ. ಇಂತಹ ಮಹಿಳಾ ವಿರೋಧಿ ನೀತಿಯನ್ನು ಖಂಡಿಸಲಾಗುವುದು, ಮಹಿಳೆಯರಿಗೆ ಅಪಮಾನ ಮಾಡಿದ ವೇಳೆ ಪುರುಷರು ಬೀದಿಗಿಳಿದು ಹೋರಾಟ ಮಾಡಬೇಕು. ಮಹಿಳಾ ವಿರೋಧಿ ನಡೆ ವಿರುದ್ಧ ಕೈಜೋಡಿಸಬೇಕು. ಇನ್ನು ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆಯನ್ನು ಬಿಗಿಗೊಳಿಸಬೇಕು. ಆರೋಪಿ ವಿರುದ್ಧ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಬೇಕು. ಹೆಣ್ಣು ಮಗಳನ್ನು ಕ್ರೂರತ್ವದಿಂದ ಕೊಲೆ ಮಾಡಿರುವ ಪ್ರಕರಣ ಇದಾಗಿದ್ದು, ಯಾವುದೇ ಕಾರಣಕ್ಕೂ ತಿರುಚಲು ಮುಂದಾಗಬಾರದು. ತಪ್ಪಿತಸ್ಥನಿಗೆ ಉಗ್ರ ಶಿಕ್ಷೆಗೆ ಗುರಿಪಡಿಸಲು ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಕರವೇ ಶಂಕರೇಗೌಡ, ನಾರಾಯಣ್, ಸತ್ಯಭಾಮ, ಎಂ.ವಿ.ಕೃಷ್ಣ, ಜಯರಾಮ, ಜವರಯ್ಯ, ಮಲ್ಲೇಶ್, ಲಂಬೋದರ, ಎ.ಎಲ್.ಬಸವೇಗೌಡ ಇತರರಿದ್ದರು.