ಜಿಲ್ಲೆ

ರೈತರಿಗೆ ವಿಷ್ಣು ಅಭಿಮಾನಿಗಳ ಬೆಂಬಲ: 51ನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟಾವಧಿ ಧರಣಿ

reportermys

ಮಂಡ್ಯ: ಪ್ರತಿ ಟನ್ ಕಬ್ಬಿಗೆ 4,500 ರೂ. ಹಾಗೂ ಪ್ರತಿ ಲೀಟರ್ ಹಾಲಿಗೆ 40 ರೂ. ನಿಗದಿ ಮಾಡಬೇಕೆಂದು ರೈತ ಸಂಘದ ಕಾರ್ಯಕರ್ತರು ನಗರದ ಸರ್‌ಎಂವಿ ಪ್ರತಿಮೆ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸೋಮವಾರ 50ನೇ ದಿನ ಪೂರೈಸಿದೆ. ಅಂತೆಯೇ ಪ್ರತಿಭಟನೆಗೆ ಬೆಂಬಲ ಸೂಚಿಸಿ ವಿಷ್ಣು ಸೇನಾ ಸಮಿತಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸಾಥ್ ನೀಡಿದರು.

ಸಮಿತಿಯ ಬಲರಾಮು ಮಾತನಾಡಿ, ವಿಷ್ಣುವರ್ಧನ್ ಅವರ ಅಭಿಮಾನಿಗಳು ರೈತರ ಜತೆ ಇದ್ದೇವೆ. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬೇಕು. ಸರ್ಕಾರ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಸಮಿತಿಯ ಎಚ್.ಡಿ.ಶಿವಕುಮಾರ್ ಮಾತನಾಡಿ, ವಿಷ್ಣುವರ್ಧನ್ ಅವರು ರೈತರ ಪರವಾಗಿಯೇ ಸಾಕಷ್ಟು ಚಿತ್ರಗಳನ್ನು ಮಾಡಿದ್ದಾರೆ. ಅವರಿಗೂ ರೈತರ ಪರವಾದ ಕಾಳಜಿ ಇತ್ತು ಎಂಬುದಕ್ಕೆ ಇಲ್ಲಿ ನೆರೆದಿರುವ ಅವರ ಅಭಿಮಾನಿಗಳೇ ಸಾಕ್ಷಿಯಾಗಿದ್ದಾರೆ. ನಾವು ಸದಾ ರೈತರ ಜತೆಗಿರುತ್ತೇವೆ ಎಂಬುದಷ್ಟೇ ಅಲ್ಲ ಅಗತ್ಯವಿದ್ದರೆ ರಸ್ತೆಗಿಳಿದು ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ಹೇಳಿದರು.

ಸಮಿತಿಯ ಶಶಾಂಕ್ ಮಾಚಹಳ್ಳಿ, ಚಿಕ್ಕಮಂಡ್ಯ ಪ್ರಕಾಶ್, ಗೋಪಾಲ್, ಬಸವರಾಜು, ತುಳಸಿ ಕೃಷ್ಣ, ವಿನಯ್, ನಾಗರಾಜು, ಜೈಕೀರ್ತಿ, ಕಾರ್ತಿಕ್ ಭಾಗವಹಿಸಿದ್ದರು.

28ರಂದು ವಿಭಿನ್ನ ಪ್ರತಿಭಟನೆ: ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಮಾತನಾಡಿ, ಧರಣಿ 50 ದಿನ ಪೂರೈಸಿದೆ. ದೇಶದಲ್ಲಿ ರೈತರು ಮುಖ್ಯವೋ, ಉದ್ಯಮಿ ಮುಖ್ಯವೋ ಎಂಬುವುದನ್ನು ಸರ್ಕಾರಕ್ಕೆ ತಿಳಿಸಲು ಡಿ.28ರಂದು ವಿಭಿನ್ನ ಪ್ರತಿಭಟನೆ ನಡೆಸಲಾಗುವುದು. ಕೇಂದ್ರ ಗೃಹಸಚಿವ ಅಮಿತ್ ಷಾ ಅವರು ಜಿಲ್ಲೆಗೆ ಆಗಮಿಸುವ ಹಿನ್ನೆಲೆಯಲ್ಲಿ ಹೋರಾಟ ರೂಪಿಸಲಾಗಿದೆ. ಕಬ್ಬು ಬೆಳೆಗಾರರಿಗೆ ಅನ್ಯಾಯವಾಗುತ್ತಿರುವುದು ಸರ್ಕಾರಕ್ಕೆ ಏಕೆ ಅರಿವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.