ಹುಬ್ಬಳ್ಳಿ: ಮಳೆಗಾಲ ಆರಂಭವಾಗುತ್ತಿದ್ದಂತೆ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳು ದೊಡ್ಡ ಹಳ್ಳಿಗಳಂತೆ ಭಾಸವಾಗುತ್ತವೆ. ಹವಾಮಾನ ಬದಲಾದಂತೆ ಇಲ್ಲಿನ ಬಹುತೇಕ ರಸ್ತೆಗಳು ಹದಗೆಟ್ಟು ಹೋಗುತ್ತವೆ. ಜನರು ರಸ್ತೆಯಲ್ಲಿ ಸಂಚಾರ ಮಾಡದಂತೆ ಆಗುತ್ತವೆ. ಅದರಲ್ಲೂ ಯಾವುದಾದರೂ ಅಭಿವೃದ್ಧಿ ಕಾರ್ಯ ಕೈಗೊಂಡ ರಸ್ತೆಯಲ್ಲಿ ಓಡಾಡುವ ಜನರಿಗೆ ಅಧಿಕಾರಿಗಳು ನರಕ ದರ್ಶನ ಮಾಡಿಸಿಬಿಡುತ್ತಾರೆ.
ಹುಬ್ಬಳ್ಳಿ ಧಾರವಾಡ ಮಧ್ಯದ ರಾಯಾಪುರ ಕೈಗಾರಿಕಾ ಪ್ರದೇಶದಲ್ಲಿ ನಡೆದಾಡಲು, ವಾಹನ ಸವಾರರಿಗೆ ಅನುಕೂಲಕರವಾಗಿದ್ದ ರಸ್ತೆಗಳನ್ನೇ ಅಭಿವೃದ್ಧಿ ಹೆಸರಲ್ಲಿ ಅಂದಗೆಡಿಸಲಾಗಿದೆ. ವಾಪಸ್ ಅವುಗಳನ್ನು ಸರಿಪಡಿಸುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ.
ರಾಯಾಪುರದ ಇಂಡಸ್ಟ್ರೀಯಲ್ ಎಸ್ಟೇಟ್ ನಲ್ಲಿ ಹತ್ತಾರು ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೇ ಸರ್ಕಾರಿ ಉಪಕರಣಾಗಾರ ಹಾಗೂ ತರಬೇತಿ (ಜಿಟಿಟಿಸಿ) ಸಂಸ್ಥೆಯೂ ಇದೆ. ಇಲ್ಲಿ ನಿತ್ಯ ನೂರಾರು ವಾಹನಗಳು, ಬೃಹತ್ ಟ್ರಕ್, ಲಾರಿಗಳು ಓಡಾಡುತ್ತವೆ. ದೇಶ- ವಿದೇಶದಿಂದ ಕಂಪನಿಗಳ ಪ್ರತಿನಿಧಿಗಳು ಭೇಟಿ ನೀಡುತ್ತಾರೆ. ವಿದ್ಯಾರ್ಥಿಗಳು ಇದೇ ಮಾರ್ಗವಾಗಿ ಓಡಾಡಬೇಕು.
ಆದರೆ, ಇಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸಲು ನೆಲ ಅಗೆಯಲಾಗಿದೆ. ಅಗೆದ ನಂತರ ಪೈಪ್ ಹಾಕಿ ಮಣ್ಣು ಮುಚ್ಚಿ ಕೈಬಿಡಲಾಗಿದೆ. ಇದೀಗ ಮಳೆಯಾಗುತ್ತಲೇ ನೀರು ನಿಂತು ರಾಡಿಯಾಗಿದೆ. ರಸ್ತೆ ತುಂಬ ಕೆಸರು ಆವರಿಸುತ್ತಿದ್ದು, ಜನರು ಓಡಾಡದಂತಾಗಿದೆ.
ಎಸ್ಟೇಟ್ ಒಳಗಿನಿಂದ ರಾಯಾಪುರ ಮುಖ್ಯ ರಸ್ತೆಯವರೆಗೂ ಇದೇ ಅವ್ಯವಸ್ಥೆ ಇದೆ.
ರಾಯಾಪುರ ಎಸ್ಟೇಟ್ ನಿಂದ ಮುಖ್ಯ ರಸ್ತೆಯಲ್ಲಿಯೇ ಖಾಸಗಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದೊಡ್ಡದಿವೆ. ಅವರೆಲ್ಲರೂ ರಾಡಿಮಯ ರಸ್ತೆಯಲ್ಲೇ ನಿತ್ಯ ಸಂಚಾರ ಮಾಡಬೇಕಿದೆ.
ಖಾಸಗಿ ಕಂಪನಿಯವರು ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಕೈಗೊಂಡಿದ್ದಾರೆ. ಕಳೆದ ಕೆಲ ವರ್ಷಗಳ ಹಿಂದೆ ರಾಯಾಪುರ ಎಸ್ಟೇಟ್ ನಲ್ಲಿ ಡಾಂಬರ್ ರಸ್ತೆಗಳನ್ನು ಮಾಡಲಾಗಿತ್ತು. ಆದರೆ, ಬಹುತೇಕ ರಸ್ತೆಗಳನ್ನು ಅಗೆಯಲಾಗಿದೆ. ಮರು ನಿರ್ಮಾಣ ಮಾಡಿಲ್ಲ. ಹಾಗಾಗಿ ಎಲ್ಲ ರಾಡಿ, ಕೊಳಚೆ ನೀರು ರಸ್ತೆಯಲ್ಲಿಯೇ ನಿಲ್ಲುವಂತಾಗಿದೆ.
ಶುಭ್ರ ವಸ್ತ್ರಗಳನ್ನು ಹಾಕಿಕೊಂಡು ಈ ರಸ್ತೆಯಲ್ಲಿ ನಡೆದು ಹೋಗದಂತಾಗಿದೆ. ಶಾಲೆ, ಕಾಲೇಜು ವಿದ್ಯಾರ್ಥಿಗಳು ಇದರಿಂದ ಬಹುದೊಡ್ಡ ತೊಂದರೆ ಅನುಭವಿಸುತ್ತಿದ್ದಾರೆ.