ರೋಣ: ಪರಕೀಯರಿಂದ ತಾಯ್ನಾಡಿನ ರಕ್ಷಣೆಗಾಗಿ ತನ್ನ ಪ್ರಾಣ ಲೆಕ್ಕಿಸದೇ ದಿಟ್ಟತನದಿಂದ ಹೋರಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ದೇಶ ನಿಷ್ಠೆ, ಹೋರಾಟ, ಧೈರ್ಯ, ನಾಯಕತ್ವ ಯುವಜನತೆಗೆ ಸ್ಪೂರ್ತಿಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಪಟ್ಟಣದ ಹೊಸ ಸಂತೆ ಬಜಾರದಲ್ಲಿ ಮಾತೋಶ್ರೀ ಬಸಮ್ಮ ಎಸ್. ಪಾಟೀಲ ವೇದಿಕೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ ಗಜೇಂದ್ರಗಡ ವತಿಯಿಂದ ಭಾನುವಾರ ಜರುಗಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ದೇಶ ಪ್ರೇಮ, ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ನಾಡು, ದೇಶದುದ್ದಗಲಕ್ಕೂ ಹಬ್ಬಿಸಿದ ರಾಯಣ್ಣ, ಕಿತ್ತೂರ ಸಂಸ್ಥಾನದ ರಕ್ಷಣೆ ಪಣತೊಟ್ಟು ಪ್ರಾಣಾರ್ಪಣೆಗೈದ ಮಹಾನ್ ವ್ಯಕ್ತಿ, ವೀರ ಸೇನಾನಿ ರಾಯಣ್ಣ ಶೌರ್ಯ, ಪರಾಕ್ರಮ, ಹೋರಾಟ ಪ್ರತಿ ಮನೆ ಮನೆಗೆ ತಲುಪುವಂತಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ರಾಜ್ಯದಲ್ಲಿನ ಕೆಲ ರೈಲು ನಿಲ್ದಾಣ, ಬಸ್ ನಿಲ್ದಾಣ ಹಾಗೂ ವಿಶ್ವ ವಿದ್ಯಾಲಯಕ್ಕೆ ಸಂಗೊಳ್ಳಿ ರಾಯಣ್ಣನ ಹೆಸರಿಡಬೇಕು ಎಂಬ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಸಂಗೊಳ್ಳಿ ರಾಯಣ್ಣನ ಹೋರಾಟ ಬದುಕು, ವಿಚಾರಧಾರೆಗಳು ಪ್ರತಿಯೊಬ್ಬರಿಗೂ ತಿಳಿಯಬೇಕು. ಮಹಾತ್ಮ ಗಾಂಧಿಯವರ, ಡಾ. ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡುವ ರಾಜಕಾರಣಿಗಳಿದ್ದಾರೆ. ಇಂತಹ ಮಾತುಗಳನ್ನಾಡುವವರಿಗೆ ಬುದ್ಧಿ ಕಲಿಸುವಲ್ಲಿ ಯುವ ಜನತೆ ಜಾಗೃತರಾಗಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಧಾರವಾಡದ ಬಸವರಾಜ ದೇವರು ಮಾತನಾಡಿ, ದೇಶದ ಪರಂಪರೆ, ಮಹಾನ್ ನಾಯಕರ ಜೀವನ, ಸಾಧನೆ, ಹೋರಾಟ ಕುರಿತು ತಿಳಿದುಕೊಳ್ಳಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ ಅಧ್ಯಕ್ಷ ಎಚ್.ಎಸ್. ಸೊಂಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಆರ್. ಗುಡಿಸಾಗರ, ಐ.ಎಸ್. ಪಾಟೀಲ, ಬಸವರಾಜ ನವಲಗುಂದ, ಪರಶುರಾಮ ಅಳಗವಾಡಿ, ಬಸವರಾಜ ಜಗ್ಗಲ, ಮಿಥುನ ಪಾಟೀಲ, ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ, ಉಪಾಧ್ಯಕ್ಷ ದುರ್ಗಪ್ಪ ಹಿರೇಮನಿ, ಅಶೋಕ ಬಾಗಮಾರ, ವೀರಣ್ಣ ಶೆಟ್ಟರ, ಶರಣಪ್ಪ ಬೆಟಗೇರಿ, ಹನಮಂತಪ್ಪ ಅಬ್ಬಿಗೇರಿ, ಮುದಕಪ್ಪ ಪ್ರಭಣ್ಣವರ, ದಶರಥ ಗಾಣಿಗೇರ, ವಿ.ಬಿ. ಸೋಮನಕಟ್ಟಿಮಠ, ಗಜೇಂದ್ರಗಡ ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಬಾವಾಸಾಬ್ ಬೆಟಗೇರಿ, ಯೂಸೂಫ್ ಇಟಗಿ, ಶರಣಪ್ಪ ಕಂಬಳಿ, ರಾಜಣ್ಣ ಸುಂಕದ, ತೋಟಪ್ಪ ನವಲಗುಂದ, ಶಫೀಕ್ ಮೂಗನೂರ, ವಿಶ್ವನಾಥ ಜಿಡ್ಡಿಬಾಗಿಲ, ಮುತ್ತಣ್ಣ ಸಂಗಳದ, ಮರ್ತಜಿ ಡಲಾಯತ, ಸುಭಾಸ ನೀಲಗಾರ, ಅರ್ಜುನ ರಾಠೋಡ, ರಾಜು ಸಾಂಗ್ಲಿಕರ, ಇತರರಿದ್ದರು. ವರ್ಷಾ ಬಾರಕೇರ ಕಾರ್ಯಕ್ರಮ ನಿರ್ವಹಿಸಿದರು.