ಜಿಲ್ಲೆ

ಗೊಬೆಲ್ ಸಿದ್ಧಾಂತದ ಮೇಲೆ ಸಿದ್ದರಾಮಯ್ಯಗೆ ನಂಬಿಕೆ : ಸಿ.ಟಿ. ರವಿ ಟೀಕೆ

ಸದೇಶ್ ಕಾರ್ಮಾಡ್

ಮೈಸೂರು: ಕೇಂದ್ರ ಸರ್ಕಾದ ಗ್ಯಾಸ್ ಸಿಲಿಂಡರ್ ದರ ಏರಿಕೆ ಮಾಡಿರುವುದನ್ನು ನಿನ್ನೆ ನಾನು ನೋಡಿದೆ, ಅದಕ್ಕೆ ಸಮರ್ಥನೆ ಕೊಡುವ ರೀತಿ ಕಾಂಗ್ರೆಸ್ ತನ್ನ ರಾಜ್ಯ ಸರ್ಕಾರದ ಬೆಲೆ ಏರಿಕೆ ಕ್ರಮವನ್ನು ಸಮರ್ಥನೆ ಮಾಡಿಕೊಳ್ಳುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಎಲ್ಲ ಅಗತ್ಯ ವಸ್ತುಗಳ ಬೆಲೆಯನ್ನು ರಾಜ್ಯ ಸರ್ಕಾರ ಏರಿಕೆ ಮಾಡಿದೆ. ಈ ಬಗ್ಗೆ ಕಾಂಗ್ರೆಸ್‌ನವರು ಪೆನ್ನು, ಪೇಪರ್ ಇಟ್ಟುಕೊಂಡು ಲೆಕ್ಕ ಹಾಕಲಿ. ಬುದ್ಧಿವಂತರಿಲ್ಲದಿದ್ದರೆ ಕ್ಯಾಲಿಕ್ಯುಲೇಟರ್ ಹಿಡಿದು ಲೆಕ್ಕ ಹಾಕಲಿ ಎಂದರು.

ಕಾಂಗ್ರೆಸ್ ತಾನು ಏರಿಸಿರುವ ಎಲ್ಲ ಬೆಲೆ ಏರಿಕೆಗೆ ಸಮರ್ಥನೆಯಾಗಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯನ್ನು ಬಳಕೆ ಮಾಡಿಕೊಳ್ಳ ಬಾರದು. ಪುಣ್ಯಾತ್ಮ ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಗ್ಯಾಸ್ ಬೆಲೆ 300 ರೂ. ಇಳಿಕೆ ಮಾಡಿ ಇದೀಗ ಈಗ 50 ರೂ. ಏರಿಕೆ ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರ ಬೆಲೆ ಏರಿಸಿದೆಯೇ ವಿನಹ ಇಳಿಸಿಲ್ಲ. ಹಾಲಿನ ದರ ಏರಿಸುತ್ತಲೇ ಇದ್ದಾರೆ. ಆದರ, ಒಂದೇ ಒಂದು ರೂಪಾಯಿ ಬೆಲೆ ಕಡಿಮೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬರುವುದಕ್ಕೂ ಮುನ್ನ ರಾಜ್ಯಕ್ಕೆ ತೆರಿಗೆ ಪಾಲು ಶೇ.31 ರಷ್ಟು ಬರುತ್ತಿತ್ತು. ಇದೀಗ ಶೇ.42 ರಷ್ಟು ಬರುತ್ತಿದೆ. ನಾವು ತಿಂತೀವಿ ನೀವೂ ತಿನ್ನಿ ಎಂಬುದು ಕಾಂಗ್ರೆಸ್ ನೀತಿ, ನಾವು ತಿನ್ನಲ್ಲ ನೀವು ತಿನ್ನೋದು ಬೇಡ ಎಂಬುದು ಬಿಜೆಪಿ ನೀತಿ. ಕಾಂಗ್ರೆಸ್ 10 ವರ್ಷದಲ್ಲಿ ರಾಜ್ಯಕ್ಕೆ 81,791 ಕೋಟಿ ರೂ. ಕೊಟ್ಟಿದೆ. ಆದರೆ, ಎನ್‌ಡಿಎ ಸರ್ಕಾರ ಪ್ರತಿವರ್ಷ 8 ಸಾವಿರ ಕೋಟಿ ರೂ.ಗಳನ್ನು ರಾಜ್ಯಕೆ ನೀಡುತ್ತಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಯಾವ ಅನ್ಯಾಯವನ್ನು ಮಾಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜಾಣ ಮರೆವು. ಗೊಬೆಲ್ ಸಿದ್ಧಾಂತದ ಮೇಲೆ ಸಿದ್ದರಾಮಯ್ಯಗೆ ನಂಬಿಕೆ. ಗೊಬೆಲ್ಸ್ ಬದುಕಿದ್ದರೆ ಸಿದ್ದರಾಮಯ್ಯ ತನ್ನ ಪ್ರೀತಿಯ ಶಿಷ್ಯ ಎನ್ನುತ್ತಿದ್ದರು. ಸುಳ್ಳನ್ನೇ ಸಾವಿರ ಬಾರಿ ಹೇಳಿ ಸತ್ಯ ಮಾಡುವುದು ಸಿಎಂ ಸಿದ್ದರಾಮಯ್ಯ ಅವರ ಕಲೆ. ಕೇಂದ್ರದ ಮೇಲೆ ಸಿದ್ದರಾಮಯ್ಯ ಮಾಡುತ್ತಿರುವುದು ಇದನ್ನೇ ಎಂದು ಟೀಕಿಸಿದರು.