ಕಡೂರು: ಕರೊನಾ ಸೋಂಕು ನಿವಾರಣೆಗೆ ಸಿದ್ಧವಾಗಿರುವ ಲಸಿಕೆಯನ್ನು ಸರ್ಕಾರ ಬಿಡುಗಡೆ ಮಾಡಿದ ನಂತರ ಮೊದಲ ಹಂತದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ನಂತರ ಪೊಲೀಸರು ಮತ್ತು ಜನ ಸಂಪರ್ಕದಲ್ಲಿರುವ ಸಿಬ್ಬಂದಿಗೆ ನೀಡಲಾಗುವುದು ಎಂದು ತಾಲೂಕು ವೈದ್ಯಾಧಿಕಾರಿ ಸಿ.ಎಸ್.ರವಿಕುಮಾರ್ ತಿಳಿಸಿದರು.
ಕರೊನಾ ಲಸಿಕೆ ವಿತರಣೆ ಕುರಿತು ಶುಕ್ರವಾರ ತಹಸೀಲ್ದಾರ್ ಉಮೇಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಎರಡನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟ ನಾಗರಿಕರಿಗೆ ಹಾಗೂ ನಂತರ 30 ವರ್ಷದೊಳಗಿನವರಿಗೆ ನೀಡಲು ನಿರ್ಧರಿಸಲಾಗಿದೆ ಎಂದರು.
18 ವರ್ಷಕ್ಕಿಂತ ಕಡಿಮೆ ವಯೋಮಾನದವರಿಗೆ ಅವಶ್ಯಕತೆ ಇರುವವರಿಗೆ ಮಾತ್ರ ಲಸಿಕೆ ನೀಡಲಾಗುವುದು. ನಿಗದಿತ ದಿನಾಂಕದಂದು ಗ್ರಾಪಂ ಚುನಾವಣೆ ನಡೆದ ಮತಗಟ್ಟೆ ಕೇಂದ್ರದಲ್ಲಿ ಲಸಿಕೆ ನೀಡಲು ಸೂಚಿಸಲಾಗಿದೆ. ಲಸಿಕೆ ಪಡೆದವರಿಗೆ ಯಾವುದೇ ಅಡ್ಡಪರಿಣಾಮ ಆಗುವುದಿಲ್ಲ. ಲಸಿಕೆ ಪಡೆದು ಅಡ್ಡ ಪರಿಣಾಮವಾದರೆ ತುರ್ತು ಚಿಕಿತ್ಸೆ ನೀಡಲು ವೈದ್ಯರು ಹಾಗೂ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲು ಸ್ಥಳದಲ್ಲೇ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗುವುದು. ಒಂದು ಕೇಂದ್ರದಲ್ಲಿ ದಿನಕ್ಕೆ 100 ಜನರಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಲಸಿಕೆ ಪಡೆಯುವವರ ಮೊಬೈಲ್ಗೆ ಎಸ್ಎಂಎಸ್ ಮೂಲಕ ತಿಳಿಸಲಾಗುವುದು ಎಂದು ಮಾಹಿತಿ ನೀಡಿದರು.