ಜಿಲ್ಲೆ

ಕಿತ್ತೂರು, ಚಿಕ್ಕಮಗಳೂರು ಶಾಸಕರನ್ನು ಸಂಪರ್ಕಿದ್ಯಾಕೆ?: ಕಾಂಗ್ರೆಸ್ ಎಂಎಲ್‌ಎ ರವಿಕುಮಾರ್ ಗಣಿಗ ಗಂಭೀರ ಆರೋಪ

ಮಂಡ್ಯ: ರಾಜ್ಯ ಸರ್ಕಾರ ಕೆಡವಲು 50 ಕೋಟಿ ರೂ. ಅಲ್ಲ, 100 ಕೋಟಿ ರೂ ಆಫರ್ ಕೊಟ್ಟಿದ್ದಾರೆ. ಹಾಗಿಲ್ಲದ ಮೇಲೆ ಕಿತ್ತೂರು ಶಾಸಕ ಬಾಬು, ಚಿಕ್ಕಮಗಳೂರು ಶಾಸಕ ತಮ್ಮಣ್ಣ ಅವರನ್ನು ಏಕೆ ಸಂಪರ್ಕ ಮಾಡಿದ್ದರು. ನಮ್ಮ ಬಳಿ ಆಪರೇಷನ್ ಕಮಲಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳಿವೆ. ಶೀಘ್ರದಲ್ಲೇ ಆಪರೇಷನ್ ಕಮಲದ ಸಾಕ್ಷ್ಯ ಬಿಡುಗಡೆ ಎಂದು ಶಾಸಕ ರವಿಕುಮಾರ್ ಗಣಿಗ ಸ್ಫೋಟಕ ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸರ್ಕಾರ ಬೀಳಿಸುವ ತವಕದಲ್ಲಿದ್ದಾರೆ. 50 ಶಾಸಕರ ಪೈಕಿ 30 ಮಂದಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡುತ್ತಿದ್ದಾರೆ. ಅದರಂತೆ 50 ಕಾಂಗ್ರೆಸ್ ಶಾಸಕರಿಗೆ ಆಮಿಷ ಒಡ್ಡಿದ್ದರು. 50 ಕೋಟಿ ರೂ ಬದಲಿಗೆ 100 ಕೋಟಿ ರೂ ಆಫರ್ ನೀಡಿದ್ದಾರೆ. ಕಳೆದ ಸರ್ಕಾರದಲ್ಲಿ ಲೂಟಿ ಮಾಡಿರುವ ಹಣದಿಂದ ನಮ್ಮ ಸರ್ಕಾರ ಕೆಡವಲು ಯತ್ನಿಸುತ್ತಿದ್ದಾರೆ. ಕೆಲವರು ಪೆನ್‌ಡ್ರೈವ್ ತೋರಿಸಿ ರಿವಿಲ್ ಮಾಡಿಲ್ಲ. ಆದರೆ ನಾವು ತೋರಿಸಿದ್ದಕ್ಕೆ ತಕ್ಕಂತೆ ಖಂಡಿತ ರಿವಿಲ್ ಮಾಡುತ್ತೇವೆ ಎಂದರು.

ಯಾರನ್ನ ಯಾವ್ಯಾವ ಹೋಟೆಲ್, ಏರ್‌ಪೋರ್ಟ್, ಗೆಸ್ಟ್ ಹೌಸ್‌ನಲ್ಲಿ ಸಂಪರ್ಕಿಸಿದ್ದಾರೆ ಮಾಹಿತಿ ಇದೆ. ಈ ಬಗ್ಗೆ ಆಡಿಯೋ, ವಿಡಿಯೋ, ಸಿಡಿ, ಪೆನ್‌ಡ್ರೈವ್ ಇವೆ. ನಮ್ಮ ಶಾಸಕರನ್ನ ಎಲ್ಲೆಲ್ಲಿ ಸಂಪರ್ಕಿಸಿದರು, ಏನೇನು ಆಫರ್ ಮಾಡಿದರೆನ್ನುವುದಕ್ಕೆ ದಾಖಲೆ ಇದೆ. 50 ಶಾಸಕರನ್ನ ಆಪರೇಷನ್ ಕಮಲ ಮಾಡಲು ಹೊರಟ್ಟಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯ ಹಗರಣಗಳು ಹೊರಗೆ ಬರುತ್ತಿವೆ. ಅವರಿಗೆ ಜೈಲಿಗೆ ಹೋಗುವ ಭಯ ಶುರುವಾಗಿದೆ. ಹೀಗಾಗಿ ತಮ್ಮ ಸರ್ಕಾರ ಬರಬೇಕು ಎಂದು ಆಫರ್ ನೀಡುತ್ತಿದ್ದಾರೆ. ಶೀಘ್ರದಲ್ಲೇ ಮಾಧ್ಯಮಗಳ ಮೂಲಕ ದಾಖಲೆ ಬಿಡುಗಡೆ ಮಾಡುತ್ತೇನೆ. ಸರ್ಕಾರ ಕೆಡವಲು ಪ್ರಯತ್ನಿಸದವರು, ಈ ಬಗ್ಗೆ ತನಿಖೆ ಮಾಡಿಸಿ ಎನ್ನುತ್ತಿದ್ದಾರೆ. ಅದೇ ಪ್ರಯತ್ನದಲ್ಲಿರುವವರು ಯಾರು ತನಿಖೆ ಮಾಡಿಸಿ ಎನ್ನುತ್ತಿಲ್ಲ. ನಮ್ಮ ಶಾಸಕರು ಬಿಜೆಪಿ ಆಮಿಷಗಳಿಗೆ ಬಲಿಯಾಗಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ, ಸರ್ಕಾರವೂ ಸ್ಥಿರವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.