ಮಂಡ್ಯ: ಮಂಡ್ಯದಲ್ಲಿ ಉದ್ಯೋಗ ಸೃಷ್ಟಿಯಾಗಬೇಕಿದೆ. ಆದ್ದರಿಂದ ಯಾರೇ ಏನೇ ಹೋರಾಟ ಮಾಡಲಿ ಕೆಆರ್‌ಎಸ್‌ನಲ್ಲಿ ಅಮ್ಯೂಸ್ಮೆಂಟ್ ಪಾರ್ಕ್, ಕಾವೇರಿ ಆರತಿ ಆಗಬೇಕು ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆಯಿಂದ ರೈತರು ಹಾಗೂ ಅವರ ಮಕ್ಕಳಿಗೆ ಅನುಕೂಲ ಆಗಲಿದೆ. ವಿರೋಧ ಮಾಡುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಮಂಡ್ಯ ದೊಡ್ಡ ಹಳ್ಳಿ ರೀತಿ ಇದೆ. ಅಭಿವೃದ್ಧಿಯಾಗಬೇಕಾದರೆ ಮಂಡ್ಯಕ್ಕೆ ಜನರು ಬರಬೇಕು. ಈ ಎರಡು ಯೋಜನೆಯಿಂದ ಡ್ಯಾಂಗೆ ಯಾವುದೇ ಧಕ್ಕೆ ಆಗಲ್ಲ. ಜನರು ಬಂದರೇ ಡ್ಯಾಂ ಕಲ್ಲಿಗೆ ಗುದಿಯುತ್ತಾರಾ?. ಕಾವೇರಿ ಆರತಿಯನ್ನ ನಮ್ಮ ಸರ್ಕಾರ ಮಾಡೇ ಮಾಡುತ್ತೆ. ರೈತರ ವಿರೋಧದ ಹಿಂದೆ ಯಾವ ಷಡ್ಯಂತ್ರ ಇದಿಯೋ ಗೊತ್ತಿಲ್ಲ ಎಂದರು.
ಕರ್ಫೂರ ಹಚ್ಚುವುದಕ್ಕೆ 100 ಕೋಟಿ ರೂ ಏಕೆ ಎಂಬ ರೈತರ ಹೇಳಿಕೆಗೆ ಪ್ರತಿಕ್ರಿಯಿಸಿ, ಕರ್ಫೂರ ಹಚ್ಚುವುದಕ್ಕೆ 20 ರೂ ಸಾಕು. ಆದರೆ ಆರತಿ ಮಾಡಲು ಸೌಲಭ್ಯ ಬೇಕು. 20 ಸಾವಿರ ಜನರು ಕುಳಿತು ನೋಡಬೇಕು. ಆದ್ದರಿಂದ ಯೋಜನೆಗೆ ಡಿಪಿಆರ್ ಆಗಲಿದೆ. ವಿರೋಧ ಮಾಡುವವರು ಡಿಪಿಆರ್ ತರಿಸಿಕೊಂಡು ನೋಡಿ. ಯಾವುದಕ್ಕೆ ಎಷ್ಟೆಷ್ಟು ಖರ್ಚು ಆಗಲಿದೆ ಎಂದು ಪರಿಶೀಲಿಸಿ. ಒಂದು ವೇಳೆ ಭ್ರಷ್ಟಾಚಾರ ಕಂಡರೆ ಕೇಸ್ ಹಾಕಿ ಜೈಲಿಗೆ ಕಳುಹಿಸಿ. ಅದು ಬಿಟ್ಟು ಮಾಡುವ ಮುನ್ನವೇ ಅದ್ಯಾಕೆ, ಇದ್ಯಾಕೆ ಎನ್ನುವುದು ಸರಿಯಲ್ಲ. ಕರ್ಫೂರ 20 ರೂಪಾಯಿ ಆದರೆ ಅದರ ಹಿಡಿ 400 ರೂಪಾಯಿ. ಆದ್ದರಿಂದ ರೈತರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಕಾವೇರಿ ಆರತಿ ಮಾಡುತ್ತೇವೆ ಎಂದರು.
100 ಕೋಟಿ ರೂ ಕಾವೇರಿ ಆರತಿಗೆ ವಿರೋಧ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಟಾಂಗ್ ನೀಡಿದ ಶಾಸಕ, ಕುಮಾರಸ್ವಾಮಿ ಅವರ ರೀತಿ 8 ಸಾವಿರ ಕೋಟಿ ರೂ ಅಲ್ಲ. ಮುಖ್ಯಮಂತ್ರಿ ಆಗಿದ್ದಾಗ 8 ಸಾವಿರ ಕೋಟಿ ರೂ ಕೊಟ್ಟೆ, ಅಧಿಕಾರದಿಂದ ಇಳಿದ ಮೇಲೆ ಹೊರಟು ಹೋಯ್ತು ಎನ್ನುವುದಲ್ಲ. 100 ಕೋಟಿ ರೂ ಕೊಡುತ್ತಿರುವುದು ಶೇ.100 ಸತ್ಯ ಎಂದರು.
ಸಂಪುಟ ಪುನಾರಚನೆ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ, ಅದು ಹೈಕಮಾಂಡ್, ಸಿಎಂಗೆ ಬಿಟ್ಟ ವಿಚಾರ. ಬೆಳಗ್ಗೆ ಪ್ರಮಾಣ ವಚನ ತಗೊಂಡು ಸಂಜೆ ಮಾಜಿ ಆಗುತ್ತಿದ್ದಾರೆ. ಸಂಪುಟ ಪುನಾರಚನೆ ಕೇವಲ ಊಹಾಪೋಹ. ಸಂಪುಟ ಪುನಾರಚನೆ ಆದರೆ ಮಾಧ್ಯಮದವರಿಗೆ ತಿಳಿಸಲಾಗುವುದು. ನಾನು ಯಾವ ಹುದ್ದೆಯ ಆಕಾಂಕ್ಷಿಯೂ ಅಲ್ಲ. ಮಂಡ್ಯ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಮಾಡುವುದು ನನ್ನ ಗುರಿ. ನರೇಂದ್ರಸ್ವಾಮಿ ಅವರು ಮಂತ್ರಿ ಆಕಾಂಕ್ಷಿ ಇದ್ದಾರೆ. ಅವರಿಗೆ ಈಗಾಗಲೇ ಮಾಲಿನ್ಯ ನಿಯಂತ್ರಣ ಬೋರ್ಡ್ ಕೊಟ್ಟಿದ್ದಾರೆ. ನರೇಂದ್ರಸ್ವಾಮಿ ಹಿರಿಯರು ಇದ್ದಾರೆ, ಅವರಿಗೆ ಮಂತ್ರಿ ಕೊಡಬಹುದು. ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಅಧ್ಯಕ್ಷರ ಬದಲಾವಣೆಯ ವಿಚಾರ ನಮ್ಮ ಪಕ್ಷದಲ್ಲಿ ಚರ್ಚೆಯಾಗಿಲ್ಲ. ಸುಮ್ಮನೆ ಊಹಾಪೋಹಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ನಾಯಕರಿಗೆ ಮರ್ಯಾದೆ ಇಲ್ಲ
ಬೆಂಗಳೂರು ಕಾಲ್ತುಳಿತ ಪ್ರಕರಣದಲ್ಲಿ ಸಿಎಂ, ಡಿಸಿಎಂ ರಾಜೀನಾಮೆ ನೀಡಬೇಕೆಂಬ ಬಿಜೆಪಿ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಶಾಸಕ ರವಿಕುಮಾರ್ ಗಣಿಗ, ಸಿಎಂ, ಡಿಸಿಎಂ ಏಕೆ ರಾಜೀನಾಮೆ ನೀಡಬೇಕು. ಸರಿಯಾದ ಸೆಕ್ಯುರಿಟಿ ಕೊಡಬೇಕಾಗಿದ್ದು ಪೊಲೀಸರ ಕರ್ತವ್ಯ. ನಾನು ಕಾರ್ಯಕ್ರಮ ಮಾಡಿ ಲಾಠಿ ಹಿಡಿದು ನಿಲ್ಲುವುದಕ್ಕೆ ಆಗಲ್ಲ. ಇಷ್ಟು ಜನ ಬರುತ್ತಾರೆಂದು ಇಂಟಲಿಜೆನ್ಸ್‌ನಿಂದ ಊಹಿಸಬೇಕು. ಆ ಮೇಲೆ ಅಗತ್ಯ ಭದ್ರತೆಯನ್ನು ಪೊಲೀಸ್ ಅವರು ಹಾಕಬೇಕು ಎಂದರು.
ಬಲವಂತವಾಗಿ ಯಾರಿಗೂ ಸನ್ಮಾನ ಮಾಡಿಲ್ಲ. ಕೆಸಿಎ ಮತ್ತು ಆರ್‌ಸಿಬಿ ಅವರು ಸಿಎಂ ಬಳಿ ಬಂದು 18 ವರ್ಷ ಬಳಿಕ ಗೆದ್ದಿದ್ದೇವೆ ಎಂದರು. ಅದಕ್ಕಾಗಿ ನಮಗೆ ವಿಧಾನಸೌಧ ಮುಂದೆ ಸನ್ಮಾನ ಮಾಡಿ ಎಂದು ಸಿಎಂನ ಅವರೇ ಕೇಳಿಕೊಂಡಿದ್ದರು. ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ. ಕಾಲ್ತುಳಿತಕ್ಕೆ ಸಾವನ್ನಪ್ಪಿರುವುದು ನನಗೂ ಬೇಸರ ಇದೆ, ಈ ದುರಂತ ಆಗಬಾರದಿತ್ತು. ಈಗಾಗಲೇ ಕರ್ತವ್ಯ ಲೋಪ ಮಾಡಿರುವವರ ವಿರುದ್ಧ ಕ್ರಮ ಆಗಿದೆ. ಬಿಜೆಪಿ ಅವರಿಗೆ ಮಾಡಲು ಕೆಲಸ ಇಲ್ಲ ಎಂದರು.
ಡಾ.ರಾಜ್‌ಕುಮಾರ್ ಅವರು ನಿಧನರಾದಾ ನನ್ನ ಕಣ್ಣು ಮುಂದೆಯೇ ಹೊಡೆದಿದ್ದಾರೆ. ಅಂದು ಯಾರು ಸಹ ಗಲಾಟೆ ಮಾಡುತ್ತಾ ಇರಲಿಲ್ಲ. ಆದರೂ ನನ್ನ ಕಣ್ಣು ಮುಂದೆ ಗುಂಡು ಹೊಡೆದರು. ನನ್ನ ಕಣ್ಣಲ್ಲಿ ಅಂದು ನಾಲ್ಕು ಹೆಣ ನೋಡಿದ್ದೇನೆ. ಅಂದು ಪೊಲೀಸರ ವೈಫಲ್ಯ ಆಗಿರಲಿಲ್ವಾ. ನಿಮ್ಮ ಕಾಲದಲ್ಲಿ ಗುಂಡು ಹೊಡೆದರೆ ಗುಂಡು, ಈಗ ನಮ್ಮ ಕಾಲದಲ್ಲಿ ಆದರೆ ಏನು. ಆರ್‌ಸಿಬಿ ಅವರು ಬೆಂಗಳೂರಿಗೆ ಬೇಗ ಬಂದರೆ ನಾವು ಏನು ಮಾಡಲು ಆಗುತ್ತದೆ. ಎರಡು ದಿನ ಬಿಟ್ಟು ಬನ್ನಿ ಎಂದು ಆರ್‌ಸಿಬಿ ಅವರಿಗೆ ಹೇಳಬೇಕಾಗಿತ್ತು. ಜವಾಬ್ದಾರಿ ಸ್ಥಾನದಲ್ಲಿ ಇದ್ದ ಡಿಕೆಶಿ ಅವರು ಮುನ್ನೆಚ್ಚರಿಕೆ ಕ್ರಮ ವಹಿಸಿದ್ದರು. ಸೆಕ್ಯುರಿಟಿ ಕೊಟ್ಟವರನ್ನೇ ಬೈದುಕೊಂಡು ಓಡಾಡಿದರೆ ಹೇಗೆ?. ರಾಜಕೀಯ ಎಂದರೆ ನಿಂದಿಸುವುದು ಅಲ್ಲ. ಡಿ.ಕೆ.ಶಿವಕುಮಾರ್ ಅವರಿಗೆ ಆರ್‌ಸಿಬಿ ತಂಡದ ಜತೆ ಫೋಟೋ ತೆಗೆಸಿಕೊಳ್ಳುವ ಕ್ರೆಡಿಟ್ ಏನು ಇಲ್ಲ. ಈ ರಾಜ್ಯದ 7 ಕೋಟಿ ಜನ ಸಿದ್ದರಾಮಯ್ಯ, ಡಿಕೆಶಿ ಅವರ ನಾಯಕತ್ವ ಮೆಚ್ಚಿ ಕಾಂಗ್ರೆಸ್ ಗೆಲ್ಲಿಸಿದ್ದಾರೆ. ಸಾವಿನ ಮೇಲೆ ರಾಜಕೀಯ ಮಾಡುವುದು ಬಿಜೆಪಿ ಹುಟ್ಟು ಗುಣ ಎಂದು ಟೀಕಿಸಿದರು.