ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕಂಬಿ ಎಣಿಸುತ್ತಿದ್ದ ಗ್ಯಾಂಗ್‌ಸ್ಟಾರ್ ರವಿ ಪೂಜಾರಿಯನ್ನು ಮುಂಬೈ ಪೊಲೀಸರ ವಶಕ್ಕೆ ನೀಡಲಾಗಿದೆ. ನಗರದ 62ನೇ ಎಸಿಎಂಎಂ ನ್ಯಾಯಾಲಯವು 10 ದಿನಗಳ ಕಾಲ ರವಿ ಪೂಜಾರಿಯನ್ನು ಮುಂಬೈ ಪೊಲೀಸರ ವಶಕ್ಕೆ ನೀಡಿ ಆದೇಶಿಸಿದೆ.
ಬಿಲ್ಡರ್ ರಾಜು ಪಾಟೀಲ್ ಹತ್ಯೆಯಾದ ವೇಳೆ 2015ರಲ್ಲಿ ಮುಂಬೈನಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ರವಿ ಪೂಜಾರಿ ಪಾತ್ರವಿದ್ದು, ಇದರ ವಿಚಾರಣೆಗಾಗಿ ಮುಂಬೈ ಪೊಲೀಸರು ವಶಕ್ಕೆ ನೀಡುವಂತೆ ಮನವಿ ಮಾಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಮುಂಬೈನಲ್ಲಿ ಕರೊನಾ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರವಿ ಪೂಜಾರಿಯನ್ನು ಸದ್ಯ ಮುಂಬೈ ಪೊಲೀಸರ ವಶಕ್ಕೆ ನೀಡುವುದು ಸೂಕ್ತವಲ್ಲ ಎಂದು ಆರೋಪಿ ಪರ ವಕೀಲರು ವಾದಿಸಿದರು.
ರವಿ ಪೂಜಾರಿ ಪ್ರಾಣಕ್ಕೆ ಬೆದರಿಕೆಯಿದ್ದು, ವಶಕ್ಕೆ ನೀಡದಂತೆ ಮನವಿ ಮಾಡಿದ್ದರು. ರವಿ ಪೂಜಾರಿಗೆ ಹೆಚ್ಚಿನ ಭದ್ರತೆ ನೀಡಿ, ಕರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ವಹಿಸಲು ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ. ತನಿಖೆಯ ಬಳಿಕ ಮತ್ತೆ ನ್ಯಾಯಾಂಗ ಬಂಧನಕ್ಕೆ ವಹಿಸಲಿದ್ದಾರೆ. ಕೊಲೆ, ಕೊಲೆ ಯತ್ನ ಹಾಗೂ ಜೀವ ಬೆದರಿಕೆ ಪ್ರಕರಣಗಳಲ್ಲಿ ಭಾಗಿಯಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ರವಿಪೂಜಾರಿಯನ್ನು ರಾಜ್ಯ ಪೊಲೀಸರು ಬಂಧಿಸಿದ್ದರು.