ರಟ್ಟಿಹಳ್ಳಿ: ರಟ್ಟಿಹಳ್ಳಿ ಪಟ್ಟಣವು ಹಲವು ಸಮಸ್ಯೆಗಳಿಂದ ಕೂಡಿದ್ದು, ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿವಿಧ ಬೇಡಿಕೆಗಳಿಗೆ ಅಧಿಕಾರಿಗಳು ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಸಾರ್ವಜನಿಕರು ಪ.ಪಂ. ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ ಮಾತನಾಡಿ, ಪಟ್ಟಣದ ಜನತಾ ಪ್ಲಾಟ್, ಶಿವಾಜಿನಗರದ ಬಳಿ ಇರುವ ಓವರ್‌ಹೆಡ್ ಟ್ಯಾಂಕ್‌ಗಳಿಗೆ ನದಿ ನೀರು ಪೂರೈಕೆಯಾಗುತ್ತಿಲ್ಲ. ಕೆಲವೆಡೆ ಅರ್ಧಂಬರ್ಧ ನದಿ ನೀರು ಪೂರೈಕೆಯಾಗುತ್ತಿದೆ. ಕೋಟೆ ಓಣಿಯಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕ ಕಳೆದ 1 ವರ್ಷದಿಂದ ಸ್ಥಗಿತವಾಗಿದೆ. ಪಟ್ಟಣ ಪಂಚಾಯಿತಿ ಅಸ್ತಿತ್ವಕ್ಕೆ ಬಂದು 3 ವರ್ಷ ಗತಿಸಿದರೂ ಪಪಂ ಚುನಾವಣೆ ಜರುಗಿಲ್ಲ. ಹೆಚ್ಚಿನ ಅನುದಾನ ನೀಡದೇ ಇರುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಕಸ ವಿಲೇವಾರಿಗೆ ವಾಹನದ ಕೊರತೆ ಮತ್ತು ತ್ಯಾಜ್ಯ ನಿರ್ವಹಣೆ ಘಟಕದ ವ್ಯವಸ್ಥೆ ಇಲ್ಲ.
ಪಟ್ಟಣದ ಮಧ್ಯ ಭಾಗದಲ್ಲಿ ಇರುವ ಪ.ಪಂ. ವ್ಯಾಪ್ತಿಯ 10 ವಾಣಿಜ್ಯ ಮಳಿಗೆಗಳು ಕಳೆದ 3 ವರ್ಷಗಳಿಂದ ಕಾಮಗಾರಿ ಸ್ಥಗಿತವಾಗಿ ಅಪೂರ್ಣವಾಗಿದೆ. ಇದರಿಂದ ಪಪಂಗೆ ಸುಮಾರು 20 ಲಕ್ಷ ರೂ. ಹಾನಿಯಾಗಿದೆ. ಈ ಕುರಿತು ಮುಷ್ಕರ ನಡೆಸಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಮನೆ ಕಂದಾಯ, ನೀರಿನ ಕಂದಾಯ, ಇತರೆ ಕರಗಳನ್ನು ಹೆಚ್ಚಿಸಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ಆರ್ಥಿಕವಾಗಿ ಹೊರೆಯಾಗಿದೆ. ಮನೆ ಪರವಾನಗಿ ಹಾಗೂ ಕೆ.ಇ.ಬಿ.ಯಿಂದ ವಿದ್ಯುತ್ ಪಡೆಯಲು ಪಂಚಾಯಿತಿ ಎನ್.ಓ.ಸಿ. ನೀಡುತ್ತಿಲ್ಲ. ಪಟ್ಟಣ ಪಂಚಾಯಿತಿಯವರು ಸುಮಾರು 50 ಲಕ್ಷ ರೂ. ಸಾಲ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. 2020-2021 ರಿಂದ 22-23ರವರೆಗೆ ಆದ ಜಮಾ ಮತ್ತು ಖರ್ಚಿನ ವಿವರಗಳ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ತಹಸೀಲ್ದಾರರು, ಶಾಸಕರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡಬೇಕು. ಅಲ್ಲಿಯವರೆಗೆ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ತಿಳಿಸಿದರು.
ವಿಜಯ ಅಂಗಡಿ, ಉಜ್ಜಪ್ಪ ಮಳಗೊಂಡರ, ಸುರೇಶ ಉಜ್ಜಕ್ಕಳವರ, ನಾಸೀರಸಾಬ ಸೈಕಲ್ಗಾರ, ಎ.ಎಂ. ಸವಣೂರ, ಶಂಕರ ಬಿದರಿ, ಶಿವಪ್ಪ ಹೊಸ್ಮನಿ, ಗಿರೀಶ ಮಳಗೊಂಡರ, ಮಂಜಪ್ಪ ಮುದಿಯಪ್ಪನವರ ಇತರರು ಇದ್ದರು.