ಜಿಲ್ಲೆ

ಉಚಿತ ಬಿತ್ತನೆ ಬೀಜ ಎಲ್ಲ ರೈತರಿಗೂ ವಿತರಿಸಿ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ರಟ್ಟಿಹಳ್ಳಿ: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸರ್ಕಾರದಿಂದ ಉಚಿತವಾಗಿ ನೀಡುವ ಡೆಮೋ (ಪ್ರಾಯೋಗಿಕ) ಸೋಯಾಬೀನ್ ಮತ್ತಿತರ ಉಚಿತ ಬಿತ್ತನೆ ಬೀಜಗಳನ್ನು ಎರಡೇ ಗ್ರಾಮಗಳ ರೈತರಿಗೆ ವಿತರಿಸಿರುವುದನ್ನು ವಿರೋಧಿಸಿ ರಟ್ಟಿಹಳ್ಳಿ, ತಡಕನಹಳ್ಳಿ, ಮಕ್ರಿ, ಮತ್ತಿತರ ಗ್ರಾಮಗಳ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಜಡಿದು ಶುಕ್ರವಾರ ಪ್ರತಿಭಟನೆ ನಡೆಸಿದರು.
ರೈತ ಸಿದ್ದಪ್ಪ ದ್ಯಾವಕ್ಕಳವರ ಮಾತನಾಡಿ, ರೈತ ಸಂಪರ್ಕ ಕೇಂದ್ರದಲ್ಲಿ ತಾಲೂಕಿನ ಶಿರಗಂಬಿ ಮತ್ತು ಹಿರೇಮೊರಬ ಗ್ರಾಮದ ರೈತರಿಗೆ ಶೇ. 80ರಷ್ಟು ಬೀಜಗಳ ಪ್ಯಾಕೆಟ್‌ಗಳನ್ನು ಗುರುವಾರ ವಿತರಣೆ ಮಾಡಲಾಗಿದೆ. ಉಳಿದ ಗ್ರಾಮಗಳ ರೈತರಿಗೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ ಎಂದು ದೂರಿದರು.
ರೈತ ಸಂಪರ್ಕ ಕೇಂದ್ರದಲ್ಲಿ ಇಬ್ಬರು ನೌಕರರಿದ್ದು, ಆ ಪೈಕಿ ಒಬ್ಬರು ಶಿರಗಂಬಿ ಮತ್ತು ಹಿರೇಮೊರಬ ಗ್ರಾಮದವರು. ರೈತ ಸಂಪರ್ಕ ಕೇಂದ್ರಕ್ಕೆ ಸರ್ಕಾರದಿಂದ ಬಂದಿದ್ದ 8 ಕೆಜಿ ತೂಕದ 220 ಪ್ಯಾಕೆಟ್ ಸೋಯಾಬೀನ್ ಬಿತ್ತನೆ ಬೀಜಗಳನ್ನು ಶಿರಗಂಬಿ ಮತ್ತು ಹಿರೇಮೊರಬ ಗ್ರಾಮದ ರೈತರಿಗೆ ವಿತರಿಸಿದ್ದಾರೆ. ಈ ಕುರಿತು ರೈತರು ತಮ್ಮ ಗ್ರಾಮಗಳ ಹೆಸರನ್ನು ನೋಂದಣಿ ಪುಸ್ತಕದಲ್ಲಿ ನಮೂದಿಸಿದ್ದಾರೆ. ಆದರೆ, ಕಳೆದ ಎರಡ್ಮೂರು ದಿನಗಳಿಂದ ಕೇಂದ್ರಕ್ಕೆ ಆಗಮಿಸಿ ಉಚಿತ ಬೀಜಗಳನ್ನು ಯಾವಾಗ ವಿತರಿಸುತ್ತೀರಿ ಎಂದು ಬೇರೆ ಗ್ರಾಮಗಳ ರೈತರು ಕೇಳಿದ್ದಾರೆ. ಆದರೆ, ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡದೇ ತಮಗೆ ಬೇಕಾದವರಿಗೆ ವಿತರಿಸಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ಶೇಂಗಾ, ಹೆಸರು, ವಿವಿಧ ಬಿತ್ತನೆ ಬೀಜಗಳನ್ನು ಕೂಡ ಇದೇ ರೀತಿ ವಿತರಿಸಲಾಗಿದೆ. ಸರ್ಕಾರದಿಂದ ನೀಡುವ ಉಚಿತ (ಡೆಮೋ) ಬಿತ್ತನೆ ಬೀಜಗಳ ವಿತರಣೆ ಬಗ್ಗೆ ಎಲ್ಲ ಗ್ರಾಮದ ರೈತರಿಗೆ ಮಾಹಿತಿ ಇರುವುದಿಲ್ಲ. ಈ ಬಗ್ಗೆ ಅಧಿಕಾರಿಗಳು ಮುಂಚಿತವಾಗಿ ಬೀಜ ವಿತರಣೆ ಕುರಿತು ರೈತರಿಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ರೈತರೊಂದಿಗೆ ಚರ್ಚಿಸಿದರು. ಅಧಿಕಾರಿಗಳು ಈ ರೀತಿ ತಪ್ಪುಗಳನ್ನು ಮಾಡಬಾರದು. ರೈತರು ಕೂಡ ಏಕಾಏಕಿ ಈ ರೀತಿ ಪ್ರತಿಭಟನೆ ಮಾಡಬಾರದು. ಇದರಿಂದ ಉಳಿದ ರೈತರಿಗೆ ತೊಂದರೆಯಾಗುತ್ತದೆ ಎಂದು ತಿಳಿ ಹೇಳಿದರು. ಪೊಲೀಸರ ಮನವೊಲಿಕೆ ಬಳಿಕ ರೈತರು ಪ್ರತಿಭಟನೆ ಕೈಬಿಟ್ಟರು.