ರಟ್ಟಿಹಳ್ಳಿ: ಮದಗದ ಕೆಂಚಮ್ಮನ ಕೆರೆ ಹಿರೇಕೆರೂರು, ರಟ್ಟಿಹಳ್ಳಿ ಮತ್ತು ಶಿಕಾರಿಪುರ ತ್ರಿವೇಣಿ ತಾಲೂಕಿನ ರೈತರಿಗೆ ಉಪಯುಕ್ತವಾಗಿದೆ. ಸರ್ಕಾರ ಈ ಕೆರೆಗೆ ಪ್ರಾಧಿಕಾರ ರಚಿಸಿ, ಸಮಗ್ರ ನೀರಾವರಿ ಯೋಜನೆ ರೂಪಿಸಬೇಕು. ಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಬೇಕು ಎಂದು ಕೂಡಲಸಂಗಮ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ತಾಲೂಕಿನ ಮದಗ ಕೆಂಚಮ್ಮನ ಕೆರೆಗೆ ತ್ರಿವೇಣಿ ತಾಲೂಕಿನ ವೀರಶೈವ ಪಂಚಮಸಾಲಿ ಸಮಾಜದಿಂದ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಮೂರು ತಾಲುಕುಗಳ ರೈತರಿಗೆ ತೊಂದರೆಯಾಗದಂತೆ ಕೆರೆ ಅಭಿವೃದ್ದಿಗೊಳಿಸಿ ನೀರಾವರಿ ವ್ಯವಸ್ಥೆ ಮಾಡಬೇಕು. 3 ವರ್ಷಗಳಿಂದ ಸಮಾಜದ ವತಿಯಿಂದ ಬಾಗಿನ ಅರ್ಪಿಸಲಾಗುತ್ತಿದೆ. ಮದಗದ ಕೆರೆ, ಜಲಪಾತ ನೋಡಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸದ್ಯೋಮ ಇಲಾಖೆ ಇಲ್ಲಿ ಮೂಲಸೌಕರ್ಯ ಒದಗಿಸಬೇಕು ಎಂದರು.
ಸಮಾಜದ ತಾಲೂಕು ಅಧ್ಯಕ್ಷ ಪರಮೇಶಪ್ಪ ಹಲಗೇರಿ ಮಾತನಾಡಿ, ಮಳೆ ಕೊರತೆಯಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ಸಮಪರ್ಕವಾಗಿ ವಿದ್ಯುತ್ ಪೂರೈಸಬೇಕು. ಬರಗಾಲ ಪೀಡಿತ ತಾಲೂಕು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಶ್ರೀ ವಿರೂಪಾಕ್ಷ ಸ್ವಾಮೀಜಿ, ಶ್ರೀ ಶಿವಲಿಂಗ ಸ್ವಾಮೀಜಿ, ರೇವಣಸಿದ್ದೇಶ್ವರ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಮಲ್ಲೇಶಪ್ಪ ಹುಲ್ಮನಿ, ಚಿದಾನಂದಯ್ಯ ಮರಡೀಮಠ, ಪ್ರಭಯ್ಯ ವಿರಕ್ತಮಠ, ಸಾಹಿತಿ ಡಾ. ನಿಂಗಪ್ಪ ಚಳಗೇರಿ, ಷಣ್ಮುಖಪ್ಪ ಚಳಗೇರಿ, ಪಿ.ಡಿ. ಬಸನಗೌಡ್ರ, ವೀರನಗೌಡ ಪ್ಯಾಟಿಗೌಡ್ರ, ರುದ್ರಮನಿ ಹುಲ್ಮನಿ, ಕಾವ್ಯ ಪಾಟೀಲ, ಶೋಭಾ ಪೂಜಾರ, ಕಾಂತೇಶ ಪಾಟೀಲ, ಶಂಕರಗೌಡ ಕರೇಗೌಡ್ರ, ಶಿವಾನಂದ ಪೂಜಾರ ಇದ್ದರು.
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಈಗಾಗಲೇ ಗಡಿಭಾಗದ ಜಿಲ್ಲೆಗಳಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮಾಡಿ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಇಷ್ಟಲಿಂಗ ಪೂಜೆ ಮೂಲಕ ಹೋರಾಟ ಮಾಡಲಾಗುವುದು. ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಬೇಕು. ಇಲ್ಲದಿದ್ದರೆ ವಿಧಾನಸೌದದಲ್ಲಿ ಇಷ್ಟಲಿಂಗ ಪೂಜೆ ಹೋರಾಟ ನಡೆಸಲಾಗುವುದು.ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ