ಜಿಲ್ಲೆ

ಮನೆ ಬಾಗಿಲಿಗೇ ಬರಲಿದೆ ಪಡಿತರ: ಜ.26ರಿಂದ ಜಾರಿ, ಗ್ರಾಮವಾಸ್ತವ್ಯದಲ್ಲಿ ಬೊಮ್ಮಾಯಿ ಘೋಷಣೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ದಾವಣಗೆರೆ: ರಾಜ್ಯದಲ್ಲಿ ಜನವರಿ 26ರ ನಂತರ ಪಡಿತರ ಸೌಲಭ್ಯಗಳು ಜನರ ಮನೆ ಬಾಗಿಲಿಗೇ ತಲುಪಲಿವೆ. ಈ ಸಂಬಂಧ ಸಿದ್ಧತೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಸರ್ಕಾರವನ್ನು ಜನರ ಬಳಿ ಕೊಂಡೊಯ್ಯುವ ನಿಟ್ಟಿನಲ್ಲಿ ನ್ಯಾಮತಿ ತಾಲೂಕಿನ ಸುರಹೊನ್ನೆ ಹಾಗೂ ಹೊನ್ನಾಳಿ ತಾಲೂಕಿನ ಕುಂದೂರಿನಲ್ಲಿ ಗ್ರಾಮ ವಾಸ್ತವ್ಯಕ್ಕೆ ಶನಿವಾರ ಚಾಲನೆ ನೀಡಿದ ಸಿಎಂ, ಪಡಿತರದ ಘೊಷಣೆ ಮೂಲಕ ಗಮನ ಸೆಳೆದರು.

ಇದಲ್ಲದೇ ನ. 1ರ ಕನ್ನಡ ರಾಜ್ಯೋತ್ಸವ ದಿನದಿಂದ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಾಯೋಗಿಕವಾಗಿ ‘ಜನಸೇವಕ’ ಎಂಬ ವಿನೂತನ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಪ್ರಕಟಿಸಿದರು. ಸಾಮಾಜಿಕ ಭದ್ರತೆ ಸೇರಿ ವಿವಿಧ ಯೋಜನೆಗಳು ಜನರಿಗೆ ಸುಲಭವಾಗಿ ಸಿಗುವಂತೆ ಮಾಡುವುದು ಇದರ ಒಟ್ಟಾರೆ ಉದ್ದೇಶವಾಗಿದ್ದು, ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ಯಶಸ್ವಿಯಾದರೆ ಜನವರಿ ನಂತರದಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಹೇಳಿದರು.

ಸಿಎಂ ಮಾತಿನ ಮತ್ತಷ್ಟು ಅಂಶಗಳು: ‘ಅಧಿಕಾರ ವಿಧಾನಸೌಧದಲ್ಲಿ ಹೆಪ್ಪುಗಟ್ಟಿ ಕೂಡ್ರಬಾರದು, ಜೇನುತುಪ್ಪದಂತೆ ಸ್ರವಿಸಬೇಕು ಎಂಬ ಧೋರಣೆಯೊಂದಿಗೆ ಸರ್ಕಾರ ಹೆಜ್ಜೆ ಇಟ್ಟಿದೆ. ನಮ್ಮ ಕೆಲಸಗಳು ಜನರಿಗೋಸ್ಕರ. ನಮ್ಮದು ಸ್ಪಂದನಶೀಲ ಸರ್ಕಾರ. ಸ್ವಚ್ಛ, ದಕ್ಷ, ಜನಪರ ಆಡಳಿತ ನೀಡುವುದು ನಮ್ಮ ಧ್ಯೇಯ ಎಂದರು.

ನಾನು ದಿನಕ್ಕೆ 20 ಗಂಟೆ ಕೆಲಸ ಮಾಡಲು ಸಿದ್ಧನಿದ್ದೇನೆ. ನಮ್ಮ ಸಚಿವ ಸಂಪುಟ ಅನುಭವಿಗಳು ಮತ್ತು ಉತ್ಸಾಹಿಗಳ ಸಂಗಮವಾಗಿದೆ. ಜನರು ಸೌಲಭ್ಯಗಳಿಗಾಗಿ ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿಗೆ ಹೋಗಬೇಕಿಲ್ಲ. ಗ್ರಾಪಂ ಹಂತದಲ್ಲೆ ಜನರ ಸಮಸ್ಯೆ ಇತ್ಯರ್ಥವಾಗಬೇಕು. ಇದರಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಹಿಡಿದು ಗ್ರಾಪಂ ಅಧಿಕಾರಿಗಳವರೆಗೆ ಎಲ್ಲರೂ ಭಾಗವಹಿಸಬೇಕಿದೆ. ಅಭಿವೃದ್ಧಿ ಜನರ ಸುತ್ತಲೂ ಆಗಬೇಕು, ಜನರಿದ್ದಲ್ಲಿ ಅದು ತಲುಪಬೇಕು. ಆಗ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ, ಜನರ ಓಡಾಟ ತಪ್ಪುತ್ತದೆ, ಸ್ಥಿರ ಬದುಕು ಸಿಗುತ್ತದೆ.

4 ಲಕ್ಷ ಮನೆ ನಿರ್ಮಾಣ ಗುರಿ: ಮುಂದಿನ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ 4 ಲಕ್ಷ ಮನೆಗಳನ್ನು ನಿರ್ವಿುಸುವ ಗುರಿಯಿದೆ. ಕೊಳೆಗೇರಿ ಜನರಿಗೆ 1 ಲಕ್ಷ ಮನೆ ನೀಡಲು ತೀರ್ವನವಾಗಿದೆ. ಹಿಂದಿನ ಸರ್ಕಾರಗಳು 9 ಲಕ್ಷ ಜನರಿಗೆ ಸೂರು ಕೊಡುವುದಾಗಿ ನೀಡಿದ್ದ ಭರವಸೆ ಘೊಷಣೆಗೆ ಸೀಮಿತವಾಯಿತು. ನಾವು ಹಾಗಲ್ಲ, ಹೇಳಿದ್ದನ್ನು ಮಾಡಿ ತೋರಿಸುತ್ತೇವೆ. ಜಲಜೀವನ ಮಿಷನ್ ಅಡಿಯಲ್ಲಿ 2000 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. 15 ರಿಂದ 20 ಹಳ್ಳಿಗಳನ್ನು ಅಮೃತ ಆದರ್ಶ ಗ್ರಾಮ ಮಾಡಲಾಗುವುದು. ಇದರಲ್ಲಿ ಯಶಸ್ಸು ಸಾಧಿಸಿದ ಗ್ರಾಮಕ್ಕೆ 25 ಲಕ್ಷ ರೂ.ಗಳ ಬೋನಸ್ ನೀಡಲಿದ್ದೇವೆ. ಗುಡಿಸಲುಮುಕ್ತ ಗ್ರಾಪಂ ನಮ್ಮ ಗುರಿಯಾಗಿದೆ. 2700 ಸ್ವಸಹಾಯ ಸಂಘಗಳಿಗೆ 1 ಲಕ್ಷ ರೂ., ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 75 ಸಾವಿರ ಮಕ್ಕಳಿಗೆ ಕೌಶಲ ನೀಡುವ ಕಾರ್ಯಕ್ರಮ ರೂಪಿಸಿದ್ದೇವೆ. ಉದ್ಯೋಗಾ ಧಾರಿತ ನೀತಿ ಜಾರಿಗೆ ತರಲಾಗುತ್ತಿದೆ ಎಂದು ಸಿಎಂ ಹೇಳಿದರು. 180 ಐಟಿಐಗಳನ್ನು ಮೇಲ್ದರ್ಜೆಗೇರಿಸಿದ್ದು, ಇನ್ನಷ್ಟು ಐಟಿಐ, ಪಾಲಿಟೆಕ್ನಿಕ್​ಗಳನ್ನು ಉನ್ನತೀಕರಿಸಲಾಗುವುದು. ರೈತರಿಗೆ ಪುಕ್ಕಟೆ ವಿದ್ಯುತ್, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ಭಾಗ್ಯಲಕ್ಷ್ಮಿ ಬಾಂಡ್, ಸೈಕಲ್ ವಿತರಣೆಯಂತಹ ಯೋಜನೆಗಳು ಯಡಿಯೂರಪ್ಪ ಅವರಿಗಿಂತ ಪೂರ್ವದಲ್ಲಿ ಇತ್ತೇ? ಅಂತಹ ಬದಲಾವಣೆ ತಂದ ನಾಯಕರ ಮಾರ್ಗದರ್ಶನದಲ್ಲಿ ಸರ್ಕಾರ ನಡೆಯುತ್ತಿದೆ.’ ಶಾಸಕ ರೇಣುಕಾಚಾರ್ಯ ಸಲ್ಲಿಸಿದ ಬೇಡಿಕೆಗೆ ಸ್ಪಂದಿಸಿದ ಸಿಎಂ, ಗ್ರಾಮ ವಾಸ್ತವ್ಯದ ಸವಿನೆನಪಿಗೆ ನ್ಯಾಮತಿ ತಾಲೂಕಿಗೆ ಮಿನಿ ವಿಧಾನಸೌಧ ಕಟ್ಟಡ ನಿರ್ವಣಕ್ಕೆ ವಾಗ್ದಾನ ಮಾಡಿದರು. ಕಂದಾಯ ಸಚಿವ ಆರ್. ಅಶೋಕ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ಪ್ರೊ. ಲಿಂಗಣ್ಣ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಇತರರು ಇದ್ದರು.