ಮಡಿಕೇರಿ:
ಆಹಾರ ಇಲಾಖೆಯ ಸರ್ವರ್ ಅಪ್‌ಡೇಟ್ ಆದ ನಂತರ ಜಿಲ್ಲೆಯ ಪಡಿತರ ಅಂಗಡಿಗಳಲ್ಲೂ ಸಮಸ್ಯೆ ಕಾಣಿಸಿಕೊಂಡಿದೆ. ಮಾಸಿಕ ಪಡಿತರ ಪಡೆದುಕೊಳ್ಳಲು ಹಲವೆಡೆ ಪಡಿತರ ಚೀಟಿದಾರರು ದಿನಪೂರ್ತಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಪಡಿತರ ವಿತರಕರೂ ಆಹಾರ ಧಾನ್ಯಗಳನ್ನು ವಿತರಿಸಲು ಪರದಾಡುವಂತಾಗಿದೆ. ಇನ್ನು 2-3 ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯಲಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜನ ಸಾಮಾನ್ಯರಿಗೆ ಸಮಸ್ಯೆ ರಹಿತ ಸೇವೆ ನೀಡುವ ಉದ್ದೇಶದಿಂದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಹೊಸ ಸರ್ವರ್ ಅಳವಡಿಸಿದೆ. ಅ.17ರ ತನಕ ಇದೇ ಕೆಲಸದಲ್ಲಿ ಇಲಾಖೆ ಮಗ್ನವಾಗಿತ್ತು. ಅ. 17ರಿಂದ ಹೊಸ ಸರ್ವರ್ ಬಳಸಲು ಶುರು ಮಾಡಲಾಗಿದೆ. ಆದರೆ ಅಲ್ಲಿಂದ ಈಚೆಗೆ ಸಮಸ್ಯೆಯೂ ಶುರುವಾಗಿದೆ. ಇದರಿಂದಾಗಿ ಫಲಾನುಭವಿಗಳು ಮತ್ತು ಆಹಾರ ಧಾನ್ಯ ವಿತರಕರು ಪರದಾಡುವಂತಾಗಿದೆ.
ದಿನಗೂಲಿ ಮಾಡುವವರು ತಮ್ಮ ಕೆಲಸ ಬಿಟ್ಟು ದಿನಪೂರ್ತಿ ಪಡಿತರ ಅಂಗಡಿ ಎದುರು ನಿಲ್ಲುವಂತಾಗಿದೆ. ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಸರ್ವರ್ ಸಮಸ್ಯೆ ಸರಿ ಹೋಗಬಹುದು ಎನ್ನುವ ನಿರೀಕ್ಷೆಯಲ್ಲೇ ಕಾಲ ಕಳೆಯುವಂತಾಗಿದೆ. ರಾಜ್ಯದ ಇತರೆಡೆಗಳಲ್ಲೂ ಈ ಸಮಸ್ಯೆ ಇದ್ದು, ಗುಡ್ಡಗಾಡು ಪ್ರದೇಶವಾಗಿರುವ ಕೊಡಗಿನಲ್ಲಿ ಇದರಿಂದಾಗಿ ಜನಸಾಮಾನ್ಯರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ.
ಆರಂಭದಲ್ಲಿ ಈ ಸಮಸ್ಯೆ 1-2 ದಿನಗಳಲ್ಲಿ ಸರಿಹೋಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಒಂದು ವಾರ ಕಳೆದರೂ ಬಹುತೇಕ ಕಡೆಗಳಲ್ಲಿ ಹಾಗೆಯೇ ಮುಂದುವರಿದಿದೆ. ಸೋಮವಾರಪೇಟೆ, ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚಿನ ತೊಂದರೆ ಆಗುತ್ತಿದೆ ಎಂದು ಅಲ್ಲಿಯ ಫಲಾನುಭವಿಗಳು ದೂರಿಕೊಂಡಿದ್ದಾರೆ. ಈ ಭಾಗದಲ್ಲಿ ಶೇ. 30ರಷ್ಟು ಕೂಡ ಪಡಿತರ ವಿತರಣೆ ಆಗಿಲ್ಲ ಎನ್ನಲಾಗುತ್ತಿದೆ. ಫಲಾನುಭವಿಗಳನ್ನು ಸಮಧಾನಪಡಿಸುವಷ್ಟರಲ್ಲಿ ನ್ಯಾಯಬೆಲೆ ಅಂಗಡಿ ಸಿಬ್ಬಂದಿ ಹೈರಾಣಾಗುತ್ತಿದ್ದಾರೆ.
ಉಳಿದ ಎರಡು ತಾಲೂಕುಗಳಿಗೆ ಹೋಲಿಸಿದರೆ ಮಡಿಕೇರಿ, ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕುಗಳಲ್ಲಿ ಪರಿಸ್ಥಿತಿ ಸ್ವಲ್ಪ ಉತ್ತಮವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ಭಾಗದಲ್ಲಿ ಶೇ. 40ಕ್ಕಿಂತಲೂ ಅಧಿಕ ಪಡಿತರ ಚೀಟಿ ಫಲಾನುಭವಿಗಳಿಗೆ ಈಗಾಗಲೇ ಪಡಿತರ ವಿತರಿಸಲಾಗಿದೆ. ಆದರೂ ಅಲ್ಲಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಸರತಿ ಸಾಲುಗಳು ಕಂಡುಬರುತ್ತಿದ್ದು, ಇನ್ನು 2-3 ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ನ್ಯಾಯಬೆಲೆ ಅಂಗಡಿ ಸಿಬ್ಬಂದಿ ಸ್ವಲ್ಪ ಚಾಣಾಕ್ಷತನದಿಂದ ಕೆಲಸ ಮಾಡಿದರೆ ಸರ್ವರ್ ಸಮಸ್ಯೆ ದೊಡ್ಡದಾಗಿ ಕಾಡುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು. ಎಲ್ಲಾ ಕಡೆಗಳಲ್ಲಿ ಬೆಳಗ್ಗೆ ಒಂದೇ ಸಮಯಕ್ಕೆ ನ್ಯಾಯಬೆಲೆ ಅಂಗಡಿಗಳು ತೆರೆದುಕೊಳ್ಳುವುದರಿಂದ ಸರ್ವರ್ ಮೇಲೆ ಒತ್ತಡ ಬೀಳುತ್ತಿದೆ. ಜತೆಗೆ ಫಲಾನುಭವಿಗಳು ಒಮ್ಮೆಗೆ ಅಂಗಡಿಗಳಿಗೆ ಧಾವಿಸುತ್ತಿದ್ದಾರೆ. ಇದರ ನೇರ ಪರಿಣಾಮ ಸರ್ವರ್ ಮೇಲೆ ಬೀಳುತ್ತಿದ್ದು, ಇದರಿಂದಾಗಿಯೇ ತೊಂದರೆಗಳು ಕಾಣಿಸಿಕೊಳ್ಳುತ್ತಿದೆ. ನ್ಯಾಯ ಬೆಲೆ ಅಂಗಡಿ ಕಾರ್ಯನಿರ್ವಹಣೆಯ ವೇಳೆಯನ್ನು ಫಲಾನುಭವಿಗಳ ಗಮನಕ್ಕೆ ತಂದು ಸ್ವಲ್ಪ ವ್ಯತ್ಯಾಸ ಮಾಡಿಕೊಂಡರೆ ಸಲೀಸಾಗಿ ಕಾರ್ಯ ನಿರ್ವಹಿಸಬಹುದು ಎನ್ನುವುದು ಅಧಿಕಾರಿಗಳ ಸಲಹೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸರ್ವರ್ ಅನ್ನು ಸರ್ಕಾರದ ವಿವಿಧ ಯೋಜನೆಗಳ ಜಾರಿಗಾಗಿ ಇತರ ಇಲಾಖೆಗಳೂ ಬಳಸುವುದರಿಂದ ಕೂಡ ಸರ್ವರ್ ಮೇಲೆ ಒತ್ತಡ ಬೀಳುತ್ತಿದೆ ಎನ್ನಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಬಿಪಿಲ್ ಕಾರ್ಡ್ ಆಧಾರದಲ್ಲಿ ಸೇವೆ ನೀಡುವ ವಿವಿಧ ಇಲಾಖೆಗಳು ಆಹಾರ ಇಲಾಖೆ ಸರ್ವರ್ ಅವಲಂಬಿಸಿದೆ. ಇದು ಪಡಿತರ ಚೀಟಿ ಫಲಾನುಭವಿಗಳು ತಮ್ಮ ಪಾಲಿನ ಪಡಿತರ ಪಡೆದುಕೊಳ್ಳುವಲ್ಲಿ ಪರಿಣಾಮ ಬೀರುತ್ತಿದೆ.
ಎಲ್ಲಾ ಹೊಸ ವ್ಯವಸ್ಥೆಗಳು ಪರಿಚಯ ಆದಾಗ ಇಂಥ ಸಮಸ್ಯೆಗಳು ಸಾಮಾನ್ಯ ಎನ್ನುವುದು ಅಧಿಕಾರಿಗಳ ವಾದ. ಜನ ಸಾಮಾನ್ಯರಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ಹೊಸ ವ್ಯವಸ್ಥೆ ಪರಿಚಯಿಸಲಾಗಿದೆ. ಆರಂಭದ 3-4 ದಿವಸ ಸಮಸ್ಯೆ ಇತ್ತು. ಈಗ ನಿಧಾನಕ್ಕೆ ಸರಿಯಾಗುತ್ತಿದೆ. ಇನ್ನು ಒಂದು ವಾರದಲ್ಲಿ ಸಹಜ ಸ್ಥಿತಿಗೆ ಬರಲಿದೆ. ಮುಂದಿನ ತಿಂಗಳಿನಿAದ ಪಡಿತರ ವ್ಯವಸ್ಥೆ ಸರಾಗವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ ಅಧಿಕಾರಿಗಳು.
ಇಲಾಖೆಗೆ ಹೊಸ ಸರ್ವರ್ ಅಳವಡಿಸಲಾಗಿದೆ. ಅ.17ರಿಂದ ಈ ಹೊಸ ಸರ್ವರ್ ಬಳಸಿಕೊಳ್ಳಲಾಗಿದೆ. ಆರಂಭದಲ್ಲಿ ಸ್ವಲ್ಪ ಸಮಸ್ಯೆ ಇತ್ತು. ಅದೀಗ ಬಗೆಹರಿದಿದೆ. ಬುಧವಾರ ಒಂದೇ ದಿನ 20 ಸಾವಿರ ಪಡಿತರಚೀಟಿದಾರರಿಗೆ ಪಡಿತರ ವಿತರಿಸಲಾಗಿದೆ. ಈತನಕ ಒಟ್ಟು 45 ಸಾವಿರ ಪಟಿತರ ಚೀಟಿದಾರರಿಗೆ ಪಡಿತರ ನಿಡಲಾಗಿದೆ. ಇನ್ನು 2-3ದಿನದಲ್ಲಿ ಎಲ್ಲಾ ಸಮಸ್ಯೆ ಪರಿಹಾರ ಆಗುತ್ತದೆ. ಸಮಸ್ಯೆ ರಹಿತ ಸೇವೆ ನಿಡುವ ಉದ್ದೇಶದಿಂದಲೇ ಹೊಸ ಸರ್ವರ್ ಅಳವಡಿಸಲಾಗಿದೆ.
ಕುಮುದಾ ಶರತ್, ಜಂಟಿ ನಿರ್ದೇಶಕಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಮಡಿಕೇರಿ
ತಾರೀಕು ಇಪ್ಪತ್ತು ಕಳೆದರೆ ಸಾಕು ಐದು ಕೆ.ಜಿ. ಅಕ್ಕಿಗಾಗಿ ದಿನಗೂಲಿ ಜನರು ದಿನವಿಡೀ ಕ್ಯೂನಿಲ್ಲುವ ಪರಿಸ್ಥಿತಿ ಇದೆ. ಸಾಕಷ್ಟು ಆಧುನಿಕತೆಯ ತಂತ್ರಜ್ಞಾನ ಹೊಂದಿರುವ ಯುಗದಲ್ಲಿ ಈ ಸರ್ವರ್ ರೋಗಕ್ಕೆ ಮದ್ದಿಲ್ಲದೆ ಜನ ಪರದಾಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ. ಸರ್ವರ್ ವಾರ್. ಇದಕ್ಕೆ ಪರ್ಯಾಯ ಯಾರು ?
ಸತ್ಯ ಕರ್ಕೆರ, ಮಡಿಕೇರಿ