ತುಮಕೂರು: ಲಾಕ್‌ಡೌನ್ ಹಿನ್ನೆಲೆಲ್ಲಿ ಪಡಿತರ ಚೀಟಿ ಹೊಂದಿರುವವರು ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಲ್ಲಿ ಪಡಿತರ ಪಡೆಯಬಹುದು ಎಂದು ಸರ್ಕಾರ ಹಾಗೂ ಅಧಿಕಾರಿಗಳು ಪದೇಪದೆ ಹೇಳುತ್ತಿದ್ದರೂ ನ್ಯಾಯಬೆಲೆ ಅಂಗಡಿಗಳಲ್ಲಿ ಈ ಬಗ್ಗೆ ತಕರಾರು ಸರ್ವೇ ಸಾಮಾನ್ಯವೆನಿಸಿದೆ.
ಬೆಂಗಳೂರು ಸೇರಿ ರಾಜ್ಯದ ವಿವಿಧ ಕಡೆಗಳಿಂದ ಜಿಲ್ಲೆಯ ಪ್ರತೀ ಹಳ್ಳಿಗಳಿಗೂ ಜನ ವಾಪಸಾಗಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್, ಮೇ ತಿಂಗಳ ಪಡಿತರ ವಿತರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಆರಂಭವಾಗಿದ್ದು, ಬೇರೆ ಊರುಗಳಲ್ಲಿ ಪಡಿತರ ಚೀಟಿ ಹೊಂದಿರುವವರಿಗೆ ಈ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಸಿಗುತ್ತಿಲ್ಲ. ಹಾಗಾಗಿ, ಸರ್ಕಾರದ ಸೂಚನೆಯನ್ನು ನ್ಯಾಯಬೆಲೆ ಅಂಗಡಿಗಳಿಗೆ ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಸೂಚಿಸುವಂತೆ ಪಡಿತರ ಚೀಟಿದಾರರು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ 6,61,731 ಕಾರ್ಡ್‌ಗಳಿದ್ದು 1081 ನ್ಯಾಯಬೆಲೆ ಅಂಗಡಿಗಳಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳ ಪಡಿತರ ವಿತರಣೆ ಮಾಡಲು ಸರ್ಕಾರದಿಂದ ಅಕ್ಕಿ ಹಾಗೂ ಗೋಧಿಯನ್ನು ಎಲ್ಲ ನ್ಯಾಯಬೆಲೆ ಅಂಗಡಿಗಳಿಗೂ ಕಳುಹಿಸಲಾಗಿದೆ. ಜಿಲ್ಲೆಯೆಲ್ಲೆಡೆ ಪಡಿತರ ವಿತರಣೆ ಆರಂಭವಾಗಿದೆ. ಆದರೆ, ಬೇರೆ ಕಾರ್ಡ್‌ಗಳಿಗೆ ಪಡಿತರ ನೀಡಲು ಅಂಗಡಿ ಮಾಲೀಕರು ಒಪ್ಪದೇ ಇರುವುದು ಜನರ ಹಸಿವು ನೀಗಿಸುವ ಸರ್ಕಾರದ ಉದ್ದೇಶಕ್ಕೆ ಹಿನ್ನಡೆಯಾಗಿದೆ.
ಗ್ರಾಮೀಣರಲ್ಲಿ ಸಾಮಾಜಿಕ ಅಂತರದ ಮಹತ್ವ ತಿಳಿಸಿ ಪಡಿತರ ವಿತರಣೆಯನ್ನು ಸವಾಲಿನಿಂದಲೇ ನ್ಯಾಯಬೆಲೆ ಅಂಗಡಿಗಳಲ್ಲಿ ಮಾಡಲಾಗುತ್ತಿದೆ. ಕೆಲವು ಗ್ರಾಮಗಳಲ್ಲಿ ಸಾಮಾಜಿಕ ಅಂತರ ಕಾಪಾಡುತ್ತಿದ್ದರೆ ಮತ್ತಷ್ಟು ಗ್ರಾಮದಲ್ಲಿ ಅದರ ಪರಿವೇ ಇಲ್ಲದೆ ಜನರು ಮುಗಿಬಿದ್ದು ಪಡಿತರ ಪಡೆದುಕೊಳ್ಳಲು ಬರುತ್ತಿರುವುದು ಅಂಗಡಿಗಳಲ್ಲಿ ಸಮಸ್ಯೆ ತಂದೊಡ್ಡಿದೆ. ಒಮ್ಮೆಗೆ ಎರಡು ತಿಂಗಳ ಪಡಿತರ ಸರಬರಾಜು ಆಗಿರುವ ಹಿನ್ನೆಲೆಯಲ್ಲಿ ದಾಸ್ತಾನು ಮಾಡುವುದು ಕಷ್ಟವಾಗಿದ್ದು, ಶಾಲೆ ಕೊಠಡಿಗಳನ್ನು ಅಗತ್ಯವಿರುವ ನ್ಯಾಯಬೆಲೆ ಅಂಗಡಿಗಳು ಬಳಸಿಕೊಳ್ಳಲು ಜಿಲ್ಲಾಡಳಿತದ ವತಿಯಿಂದ ಸೂಚಿಸಲಾಗಿದೆ.
ಗೋಧಿ ಹಾಗೂ ಅಕ್ಕಿಯನ್ನಷ್ಟೇ ವಿತರಣೆ ಮಾಡಲಾಗುತ್ತಿದ್ದು ಜನರು ಉಳಿದ ಪದಾರ್ಥಕ್ಕಾಗಿ ಚಿಂತಿಸುವಂತಾಗಿದೆ. ಪಾವಗಡ ಹಾಗೂ ಚಿಕ್ಕನಾಯಕನಹಳ್ಳಿ ಪಡಿತರ ಕೇಂದ್ರಗಳಲ್ಲಿ ಹೆಚ್ಚು ಸಮಸ್ಯೆಗಳು ಕೇಳಿ ಬಂದಿವೆ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಹಾಗೂ ನ್ಯಾಬೆಲೆ ಅಂಗಡಿಗಳ ಸಿಬ್ಬಂದಿ ಕಿರಿಕಿರಿ ಬಗ್ಗೆ ದೂರುಗಳು ದಾಖಲಾಗುತ್ತಿವೆ.
ಆಹಾರ ಶಿರಸ್ತೇದಾರ್‌ಗೆ ದೂರು ನೀಡಿ: ಅಂತ್ಯೋದಯ ಕಾರ್ಡ್‌ಗೆ ಕುಟುಂಬಕ್ಕೆ 35 ಕೆಜಿ ಅಕ್ಕಿ ಅಂದರೆ ಎರಡು ತಿಂಗಳಿಗೆ 70 ಕೆಜಿ ಅಕ್ಕಿ ನೀಡಲಾಗುತ್ತಿದೆ, ಬಿಪಿಎಲ್ ಕಾರ್ಡ್‌ಗೆ ತಲಾ 5ಕೆಜಿಯಂತೆ 10ಕೆಜಿ ಅಕ್ಕಿ ಹಾಗೂ 4ಕೆಜಿ ಗೋಧಿ ನೀಡಲಾಗುತ್ತಿದೆ. ಎಪಿಎಲ್ ಕಾರ್ಡುಗಳಿಗೂ ಪಡಿತರ ನೀಡಲು ಸರ್ಕಾರ ಸೂಚಿಸಿದ್ದು 15ರೂ. ನಂತೆ 15 ಕೆಜಿ ಅಕ್ಕಿ ನೀಡಲು ಸೂಚಿಸಲಾಗಿದೆ. ಇದರಲ್ಲಿ ವ್ಯತ್ಯಾಸಗಳು ಕಂಡುಬಂದರೆ ಆಯಾ ತಾಲೂಕು ಆಹಾರ ಶಿರಸ್ತೇದಾರ್‌ಗೆ ದೂರು ನೀಡಲು ಆಹಾರ ಇಲಾಖೆ ಉಪನಿರ್ದೇಶಕ ಎಂ.ಸಿ.ಶ್ರೀನಿವಾಸ್ ಮನವಿ ಮಾಡಿದ್ದಾರೆ.
ಅನಿವಾರ್ಯವಾಗಿ ಮಾರುಕಟ್ಟೆಗೆ: ತೋಟಗಾರಿಕೆ ಇಲಾಖೆ ಹಾಪ್‌ಕಾಮ್ಸ್ ವತಿಯಿಂದ ತರಕಾರಿ ಹಾಗೂ ಹಣ್ಣುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮ ಜನರಿಗೆ ಸಾಕಷ್ಟು ಅನುಕೂಲ ಮಾಡಿದೆಯಾದರೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ನಿರುತ್ಸಾಹದಿಂದ ಕೆಲವೇ ರೈತರು ಹಾಗೂ ಕೆಲವೇ ಗ್ರಾಹಕರಿಗೆ ಯಾವುದೇ ಅನುಕೂಲ ಮಾಡುತ್ತಿಲ್ಲ. ಕೆಲವೇ ಕೆಲವು ರೈತರಿಂದ ತರಕಾರಿ ಕೊಂಡುಕೊಂಡು ಹಿರಿಯ ಅಧಿಕಾರಿಗಳು ಹಾಗೂ ರಾಜಕಾರಣಿಗಳಿರುವ ಬಡಾವಣೆಗಳಲ್ಲಿ ಹಾಪ್‌ಕಾಮ್ಸ್ ವಾಹನಗಳು ಗಿರಕಿ ಹೊಡೆಯುತ್ತಿವೆ ಎಂಬ ದೂರುಗಳು ವ್ಯಾಪಕವಾಗಿವೆ. ಜನರು ಅನಿವಾರ್ಯವಾಗಿ ಮಾರುಕಟ್ಟೆಗೆ ಬರುವ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದ ಯಾವುದೇ ಮೂಲೆಯಲ್ಲಿ ರೇಷನ್‌ಕಾರ್ಡ್ ಹೊಂದಿದ್ದರೂ ಅವರು ಇರುವ ಸ್ಥಳದಲ್ಲಿಯೇ ಪಡಿತರ ಪಡೆಯಬಹುದು. ಈ ಬಗ್ಗೆ ಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯ 1081 ನ್ಯಾಯಬೆಲೆ ಅಂಗಡಿಗಳಿಗೂ ದಾಸ್ತಾನು ತಲುಪಿದ್ದು ಮುಂದಿನ ಎರಡು ತಿಂಗಳ ಪಡಿತರವನ್ನು ಒಮ್ಮೆಗೆ ನೀಡಲಾಗುತ್ತಿದೆ. ಎಂ.ಸಿ.ಶ್ರೀನಿವಾಸಯ್ಯ ಉಪನಿರ್ದೇಶಕ, ಆಹಾರ ಇಲಾಖೆ