ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಕಾರ್ಡ್ದಾರರಿಗೆ ನೀಡಲಾಗುತ್ತಿರುವ ಹಣ ಬದಲು ಹೆಚ್ಚುವರಿ ಅಕ್ಕಿ ವಿತರಣೆ ಕುರಿತು ಬಜೆಟ್ನಲ್ಲಿ ಘೋಷಿಸಬೇಕೆಂದು ಸರ್ಕಾರಕ್ಕೆ, ರಾಜ್ಯ ಸರ್ಕಾರಿ ಪಡಿತರ ವಿತರಕ ಸಂಘ ಪತ್ರ ಬರೆದಿದೆ.
ವಿಧಾನಸಭಾ ಚುನಾವಣೆ ಮುನ್ನ ಗ್ಯಾರಂಟಿ ಯೋಜನೆಗಳ ಪೈಕಿ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ ವಿತರಿಸುವುದಾಗಿ ಕಾಂಗ್ರೆಸ್ ಸರ್ಕಾರ ಘೋಷಿಸಿತ್ತು. ಆದರೆ, ಅಕ್ಕಿ ದೊರೆಯದ ಪರಿಣಾಮ ಡಿಬಿಟಿ ಮುಖೇನ ಹಣ ನೀಡಲಾಗುತ್ತಿದೆ. ಆದರೆ, ಸಾಕಷ್ಟು ಕಾರ್ಡ್ದಾರರು ಹೆಚ್ಚುವರಿ ಪಡಿತರ ನೀಡುವಂತೆ ಕೋರಿದ್ದಾರೆ. ಅದರಂತೆ, ಕಾರ್ಡ್ದಾರರಿಗೆ ಅಕ್ಕಿ ವಿತರಿಸಬೇಕು. ಆಹಾರ ಧಾನ್ಯದ ಪ್ಯಾಕೇಟ್ ಮೇಲೆ ಸರ್ಕಾರದ ಲಾಂಛನ, ಸಿಎಂ ಮತ್ತು ಸಚಿವರ ಭಾವಚಿತ್ರ ಸಹಿತ ಅಕ್ಕಿ ವಿತರಿಸಿದರೆ ಯೋಜನೆಗೆ ಇನ್ನಷ್ಟು ಮಹತ್ವ ಸಿಕ್ಕಿದಂತಾಗುತ್ತದೆ ಎಂದು ಸಂದ ಅಧ್ಯಕ್ಷ ಟಿ.ಕೃಷ್ಣಪ್ಪ, ಸಿಎಂ ಸಿದ್ದರಾಮಯ್ಯ, ಆಹಾರ ಸಚಿವ ಕೆ.ಎಚ್.ಮುನಿಯಪ್ಪಗೆ ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರವು ಭಾರತೀಯ ಆಹಾರ ನಿಗಮ(ಎ್ಸಿಐ)ದಿಂದ ಹೆಚ್ಚುವರಿ ಅಕ್ಕಿಯನ್ನು ಸಾರ್ವಜನಿಕರಿಗೆ, ಸರ್ಕಾರಿ ಸಂಸ್ಥೆಗಳಿಗೆ ಕಡಿಮೆ ದರದಲ್ಲಿ ವಿತರಿಸಲು ಘೋಷಿಸಿದೆ. ಹೀಗಾಗಿ, ರಾಜ್ಯ ಸರ್ಕಾರ ಸಹ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ ವಿತರಿಸಲು ಕ್ರಮ ಕೈಗೊಳ್ಳಬೇಕು.ಸಕ್ಕರೆ, ತಾಳೆ ಎಣ್ಣೆ, ಸೋಪು, ಉಪ್ಪು, ಬೇಳೆ ಮತ್ತು ಬೆಲ್ಲ ಸೇರಿ ಇತರೆ ಅಗತ್ಯ ವಸ್ತುಗಳನ್ನೂ ಕಡಿಮೆ ಬೆಲೆಗೆ ನೀಡಬೇಕು ಎಂದು ಕೃಷ್ಣಪ್ಪ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.