ಲಕ್ಷ್ಮೇಶ್ವರ: ಹೂವಿನಶಿಗ್ಲಿ ವಿರಕ್ತಮಠದ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಭಾನುವಾರ ಅಪಾರ ಭಕ್ತ ಸಮೂಹದ ನಡುವೆ ಸಕಲ ವಾದ್ಯ ವೈಭವಗಳೊಂದಿಗೆ ನೆರವೇರಿತು. ಬೆಳಗ್ಗೆ ನಿರಂಜನ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಹೂವಿನ ಅಲಂಕಾರ ಹಾಗೂ ಮಂಗಳಾರತಿ, ಲಿಂ.ಶ್ರೀಗಳ ಭಾವಚಿತ್ರ ಮೆರವಣಿಗೆ ಹಾಗೂ ಗುರು ಗುಹೆಸಿದ್ಧೇಶ್ವರ ಉತ್ಸವಮೂರ್ತಿಯ ಮೆರವಣಿಗೆ ಸೂರಣಗಿ ಹಾಗೂ ಯಲವಿಗಿ ಗ್ರಾಮದ ಪುರವಂತರ ವೀರಗಾಸೆಯೊಂದಿಗೆ ನೆರವೇರಿತು. ಸಂಜೆ ರಥ ಸಾಗುತ್ತಿದ್ದಂತೆಯೇ ಅಪಾರ ಭಕ್ತ ಸಮೂಹ ಭಕ್ತಿ-ಭಾವಗಳಿಂದ ಉತ್ತತ್ತಿ, ಹಣ್ಣುಗಳನ್ನು ತೇರಿಗೆ ಸಮರ್ಪಿಸಿ ಘೋಷಣೆ ಕೂಗಿದರು. ಡೊಳ್ಳು, ನಂದಿಕೋಲು, ಕೀಲುಕುದುರೆ ನೃತ್ಯ, ಸಕಲ ವಾದ್ಯ ವೈಭವದೊಂದಿಗೆ ಅಪಾರ ಭಕ್ತ ಸಮೂಹದೊಂದಿಗೆ ರಥೋತ್ಸವ ಜರುಗಿತು. ಜ.15ರಂದು ಸೋಮವಾರ ಮಧ್ಯಾಹ್ನ 12ಕ್ಕೆ ಸಾಮೂಹಿಕ ವಿವಾಹ ಮಹೋತ್ಸವ ಸವಣೂರು ದೊಡ್ಡಹುಣಸೇ ಕಲ್ಮಠದ ಶ್ರೀ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಲಿದೆ. ಸಂಜೆ ಕಡುಬಿನೋತ್ಸವ ಬಳಿಕ ಚಿಂತನ ಗೋಷ್ಠಿ ನಡೆಯಲಿದೆ.