ಶಿರಸಿ: ನೃಸಿಂಹ ಜಯಂತಿ ನಿಮಿತ್ತ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶ್ರೀಲಕ್ಷ್ಮೀನೃಸಿಂಹ ದೇವರ ರಥೋತ್ಸವ ಬುಧವಾರ ರಾತ್ರಿ ಸಂಭ್ರಮದಿಂದ ಜರುಗಿತು.
ಕಲಶ ಜಲ ಪ್ರೋಕ್ಷಣ, ಲಘ್ವಾಧಿವಾಸ ಹೋಮ, ಕಲ್ಪೋಕ್ತ ಮಹಾ ಪೂಜೆ ಬಳಿಕ ದೇವರನ್ನು ರಥದವರೆಗೂ ಪಲ್ಲಕ್ಕಿ ಮೂಲಕ ತರಲಾಯಿತು. ಸಿಂಗಾರಗೊಂಡಿದ್ದ ರಥವೇರಿದಾಗ ಭಕ್ತರು ಜಯಘೋಷ ಮೊಳಗಿಸಿದರು.
ಆಕರ್ಷಕ ಮದ್ದುಗುಂಡು ಪ್ರದರ್ಶನ ಗಮನ ಸೆಳೆಯಿತು. ಧಾರ್ಮಿಕ ವಿಧಾನಗಳಲ್ಲಿ ಮೃಗಬೇಟೆ, ಅಷ್ಟಾವಧಾನ ಸೇವೆ ಸಮರ್ಪಣೆ ಆದವು.
ಸ್ಬರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಜಿ, ಶ್ರೀ ಆನಂದಬೋಧೇಂದ್ರ ಸರಸ್ವತೀ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ, ಕಾರ್ಯದರ್ಶಿ ಜಿ.ವಿ. ಹೆಗಡೆ ಗೊಡವೆಮನೆ, ವ್ಯವಸ್ಥಾಪಕ ದತ್ತಾತ್ರಯ ಹೆಗಡೆ ಲಿಂಗದಕೋಣ ಇತರರು ಇದ್ದರು.
ಸ್ವರ್ಣವಲ್ಲೀ ರಥದ ನಿರ್ಮಾಣ ಹಾಗೂ ರಥದ ವೇಗ ನಿಯಂತ್ರಿಸುವವರು ಪರಂಪರೆಯಿಂದ ಮುಸ್ಲಿಂ ಸಮುದಾಯದವರೇ ಆಗಿದ್ದು ಮಠದ ತೇರು ಸಾಮರಸ್ಯದ ಕೇಂದ್ರವಾಗಿದೆ ಎಂಬುದು ವಿಶೇಷವಾಗಿದೆ. ರಥೋತ್ಸವದ ಬಳಿಕ ಸ್ವರ್ಣವಲ್ಲೀ ಯಕ್ಷ ಶಾಲ್ಮಲಾದಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಚಂದ್ರಹಾಸ ಚರಿತ್ರೆ ಯಕ್ಷಗಾನ ಪ್ರದರ್ಶನಗೊಂಡಿತು.