ರಥೋತ್ಸವದಲ್ಲಿ ಸಂಸದ ಡಾ.ಕೆ.ಸುಧಾಕರ್, ಶಾಸಕ ಧೀರಜ್ ಮುನಿರಾಜು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಾಂತಕುಮಾರ್, ಜಿಲ್ಲಾಧಿಕಾರಿ ಡಾ.ಶಿವಶಂಕರ್, ಜಿಪಂ ಸಿಇಒ ಡಾ.ಕೆ.ಎನ್‌ಅನುರಾಧಾ, ಎಸ್ಪಿ ಸಿ.ಕೆ.ಬಾಬಾ, ತಹಸೀಲ್ದಾರ್ ವಿದ್ಯಾ ವಿಭಾ ರಾಥೋಡ್, ಇಒ ಮುನಿರಾಜು, ಮುಜರಾಯಿ ಇಲಾಖೆ ತಹಸೀಲ್ದಾರ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು 
ಜಿಲ್ಲೆ

ಘಾಟಿಯಲ್ಲಿ ರಥೋತ್ಸವ ಸಂಭ್ರಮ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಸಹಸ್ರಾರು ಭಕ್ತರ ಸಮಾಗಮ-ರಥದ ಸುತ್ತ 3 ಪ್ರದಕ್ಷಿಣೆ ಹಾಕಿದ ಗರುಡ!

ತೂಬಗೆರೆ: ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯ ಶ್ರೀಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಾನುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ಜರುಗಿತು.

ರಥಕ್ಕೆ ಬ್ರಹ್ಮ, ವಿಷ್ಣು, ಶಿವ ಹೆಸರಿನಲ್ಲಿ ಪೂಜೆ ಮಾಡಿ, ರಥ ಎಳೆಯುವಾಗ ಹಗ್ಗಕ್ಕೆ ವಾಸಕಿ ಎಂಬ ಸರ್ಪವನ್ನು ಆರಾಧನೆ ಮಾಡಿ ಪ್ರಧಾನ ದೇವರ ಕಳಸ ಪ್ರತಿಷ್ಠಾಪಿಸಲಾಯಿತು. ಗರಡು ಪಕ್ಷಿ ಬಂದು ರಥದ ಸುತ್ತ ಮೂರು ಪ್ರದಕ್ಷಿಣೆ ಹಾಕಿದ ನಂತರ ಮಧ್ಯಾಹ್ನ 12.10 ಗಂಟೆಗೆ ರಥ ಜರುಗಿತು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಭಕ್ತರು ತೇರಿಗೆ ಬಾಳೆಹಣ್ಣು-ದವನ ಅರ್ಪಿಸಿ ಭಕ್ತಭಾವ ಮೆರೆದರು. ಬ್ರಹ್ಮರಥೋತ್ಸವ ಹಿನ್ನೆಲೆಯಲ್ಲಿ ಬೆಳಗ್ಗೆ 2 ಗಂಟೆಯಿಂದಲೇ ದೇವರಿಗೆ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.

ಎಲ್ಲೆಡೆ ಸಿಸಿ ಕ್ಯಾಮರಾ ಕಣ್ಗಾವಲು

ಜಾತ್ರೆ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ದೊಡ್ಡಬಳ್ಳಾಪುರ ಕೆಎಸ್‌ಆರ್‌ಟಿಸಿ ಘಟಕದಿಂದ 75 ಬಸ್ ವ್ಯವಸ್ಥೆ ಮಾಡಲಾಗಿತ್ತು, ಸಹಸ್ರಾರು ಭಕ್ತರು ಸೇರಿದ ಹಿನ್ನೆಲೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಜನರ ಚಲನವಲನದ ಮೇಲೆ ನಿಗಾಯಿಡಲು ಸೂಕ್ಷ್ಮಪ್ರದೇಶ ಹಾಗೂ ದೇವಸ್ಥಾನ ಸುತ್ತ ಮುತ್ತ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಆರೋಗ್ಯ ಸಮಸ್ಯೆಗಳಾದರೆ ಮುಂಜಾಗ್ರತೆ ಕ್ರಮವಾಗಿ ದೇವಸ್ಥಾನ ಬಳಿ ವೈದ್ಯರ ತಂಡ ನಿಯೋಜನೆ ಜತೆಗೆ ಎರಡು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಇದ್ದರು.

ವಿಐಪಿ ದರ್ಶನಕ್ಕೆ ಹೋದರೂ ಬೇಗ ಆಗಲಿಲ್ಲ ದರ್ಶನ

ಬ್ರಹ್ಮರಥೋತ್ಸವ ಪ್ರಯುಕ್ತ ಭಕ್ತರ ವಿಐಪಿ ದರ್ಶನಕ್ಕೆ 500 ರೂಪಾಯಿ ನಿಗದಿಪಡಿಸಿದ್ದರು, ಆದರೆ 500 ರೂಪಾಯಿ ಕೊಟ್ಟು ದರ್ಶನಕ್ಕೆ ಹೋದವರು ಸುಮಾರು 7 ಗಂಟೆಗಳ ಕಾಲ ನಿಂತುಕೊಂಡು ದರ್ಶನ ಮಾಡುವಂತಾಯಿತು. ಭಕ್ತರು ಸಾಲಿನಲ್ಲಿ ಸಾಗುವಾಗ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ ಎಂದು ಜನ ಆಕ್ರೋಶಗೊಂಡರು. ಪೊಲೀಸರೊಂದಿಗೆ ಮಾತಿಗೆ ಮಾತು ಬೆಳೆದು ತಳ್ಳುವ ಪರಿಸ್ಥಿತಿ ಉಂಟಾಯಿತು. ಸಾಮಾನ್ಯ ಸಾಲಿನಲ್ಲಿ ನಿಂತವರೂ ಸ್ವಾಮಿ ದರ್ಶನ ಪಡೆಯಲು ಹರಸಾಹಸ ಪಡಬೇಕಾಯಿತು. ಜಾತ್ರೆಯಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಅಚ್ಚುಕಟ್ಟುಗಾಗಿ ನಿರ್ವಹಣೆ ಮಾಡಿದರು, ಅನೇಕ ಕಡೆಗಳಲ್ಲಿ ಭಕ್ತರಿಗೆ ಮಜ್ಜಿಗೆ, ಹೆಸರುಬೇಳೆ ವಿತರಣೆ ಹಾಗೂ ಅನ್ನದಾನ ನಡೆಯಿತು.

ರಥೋತ್ಸವದಲ್ಲಿ ಸಂಸದ ಡಾ.ಕೆ.ಸುಧಾಕರ್, ಶಾಸಕ ಧೀರಜ್ ಮುನಿರಾಜು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಾಂತಕುಮಾರ್, ಜಿಲ್ಲಾಧಿಕಾರಿ ಡಾ.ಶಿವಶಂಕರ್, ಜಿಪಂ ಸಿಇಒ ಡಾ.ಕೆ.ಎನ್‌ಅನುರಾಧಾ, ಎಸ್ಪಿ ಸಿ.ಕೆ.ಬಾಬಾ, ತಹಸೀಲ್ದಾರ್ ವಿದ್ಯಾ ವಿಭಾ ರಾಥೋಡ್, ಇಒ ಮುನಿರಾಜು, ಮುಜರಾಯಿ ಇಲಾಖೆ ತಹಸೀಲ್ದಾರ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.