ಮಡಿಕೇರಿ:
ಕೊಡಗಿನ ಪ್ರಮುಖ ವಾಣಿಜ್ಯ ನಗರಿ ಕುಶಾಲನಗರದ ಆರಾಧ್ಯ ದೈವ ಶ್ರೀ ಮಹಾಗಣಪತಿ ರಥೋತ್ಸವ ಶನಿವಾರ (ನ.8) ನಡೆಯಲಿದೆ. ಜಿಲ್ಲೆಯ ಅತ್ಯಂತ ದೊಡ್ಡ ರಥೋತ್ಸವ ಮತ್ತು ಜಾತ್ರೆ ಹೆಗ್ಗಳಿಕೆಯ ಈ ಪ್ರಮುಖ ಧಾರ್ಮಿಕ ಕಾರ್ಯಕ್ರಮಕ್ಕೆ ಭರದಿಂದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ 12 ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಗೋ ಜಾತ್ರೆ ಕೂಡ ಈ ರಥೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದು.
ಕೊಡಗು ಮತ್ತು ಮೈಸೂರು ಜಿಲ್ಲೆಗಳ ಗಡಿಯಲ್ಲಿ ಕಾವೇರಿ ನದಿಗೆ ಹೊಂದಿಕೊAಡAತಿರುವ ಕುಶಾಲನಗರ ಪಟ್ಟಣ ಕೊಡಗು, ಮೈಸೂರು ಹಾಗೂ ಹಾಸನ ಜಿಲ್ಲೆಗಳ ವಾತಾವರಣ ಮತ್ತು ಸಂಸ್ಕೃತಿಗಳ ಸಂಗಮವೂ ಹೌದು. ಹಾಗಾಗಿ ಇಲ್ಲಿ ಪ್ರತಿ ವರ್ಷ ನಡೆಯುವ ಶ್ರೀ ಗಣಪತಿ ರಥೋತ್ಸವಕ್ಕೆ ಈ ಮೂರೂ ಜಿಲ್ಲೆಗಳ ಜನತೆ ಸಾಕ್ಷಿಯಾಗುವುದು ವಿಶೇಷ. ಈ ವರ್ಷ ಶ್ರೀ ಗಣಪತಿಯ ರಥೋತ್ಸವ ನ.8ರ ಶನಿವಾರ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಜಾತ್ರೋತ್ಸವ ಹಿನ್ನೆಲೆಯಲ್ಲಿ ಬುಧವಾರದಿಂದಲೇ (ನ.5) ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶುರುವಾಗಿದೆ. ನ.13ರ ತನಕವೂ ಧಾರ್ಮಿಕ ಕಾರ್ಯಕ್ರಮಗಳು ಮುಂದುವರಿಯುತ್ತದೆ.
1955ರ ತನಕ 3 ದಿನಗಳ ಕಾಲ ನಡೆಯುತ್ತಿದ್ದ ಶ್ರೀ ಗಣಪತಿ ಜಾತ್ರೋತ್ಸವ 1958 ರಲ್ಲಿ 7 ದಿನಕ್ಕೆ ವಿಸ್ತರಣೆ ಆಯಿತು. ಈಗ 10 ದಿನಗಳ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜಾತ್ರೋತ್ಸವದ ಸಂಭ್ರಮ ಕಂಡುಬರುತ್ತದೆ. ಬುಧವಾರ ಬೆಳಗ್ಗೆ 10.30ಕ್ಕೆ ಸತ್ಯನಾರಾಯಣ ಪೂಜೆಯೊಂದಿಗೆ ಜಾತ್ರೋತ್ಸವದ ವಿದಿ-ವಿಧಾನಗಳಿಗೆ ಈಗಾಗಲೇ ಚಾಲನೆ ಸಿಕ್ಕಿದೆ. ಪೂಜೆ ನಂತರ ಮಧ್ಯಾಹ್ನ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ಸಂಜೆ ದೀಪಾರಾಧನೆ, ದಟ್ಟೋತ್ಸವ, ರಂಗಪೂಜೆ ಏರ್ಪಡಿಸಲಾಗಿತ್ತು. ಮಹಾಮಂಗಳರಾತಿ ನಂತರ ತೀರ್ಥ ಪ್ರಸಾದ ವಿತರಣೆ ನಡೆಯಿತು.
ಶ್ರೀ ಗಣಪತಿ ಜಾತ್ರೋತ್ಸವ ಹಿನ್ನೆಲೆಯಲ್ಲಿ ಪುಣ್ಯಾಹ, ನಾಂದಿ, ರಕ್ಷಾಬಂಧನ, ಅಂಕುರಾರ್ಪಣ, ಕಳಸ ಸ್ಥಾಪನೆ, ಋತ್ವಿಗ್ವರಣ, ಮಧುಪರ್ಕ ಇತ್ಯಾದಿ ನವಗ್ರಹ ಹೋಮ, 108 ಮೋದಕ ಸಹಿತ ಪೂರ್ಣಾಹುತಿ. ಮಹಾಮಂಗಳಾರತಿ.. ಹೀಗೆ ಆರಂಭವಾಗುವ ಧಾರ್ಮಿಕ ವಿದಿ-ವಿಧಾನಗಳಿಗೆ ನ.13 ರ ತನಕ ಪ್ರತಿದಿನವೂ ಶ್ರಿ ಗಣಪತಿ ದೇವಾಲಯ ಸಾಕ್ಷಿ ಆಗಲಿದೆ. ಚಂದ್ರ ಬಿಂಬೋತ್ಸವ, ಪಲ್ಲಕ್ಕಿ ಮಂಟಪೋತ್ಸವ ಸೇವೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗಿದೆ.
ಕಾವೇರಿ ನದಿ ತೀರದಲ್ಲಿ ಅಷ್ಟಾವಧಾನ ಸೇವೆ, ಕಾವೇರಿ ನದಿಯಲ್ಲಿ ತೆಪ್ಪೋತ್ಸವವೂ ನಡೆಯಲಿದೆ. 3 ದಿನ ಪಲ್ಲಕ್ಕಿ ಉತ್ಸವ ಆಯೋಜಿಸಲಾಗಿದೆ. ಮೂಷಿಕ ವಾಹನ ಉತ್ಸವ, ವೃಷಭ ವಾಹನ ಸೇವೆ, ಅಶ್ವರೂಢ ವಾಹನ ಸೇವೆ, ಮಯೂರ ವಾಹನ ಸೇವೆ, ಗಜರೂಢ ಸೇವೆ, ತೆಪ್ಪೋತ್ಸವ, ದೇವರಿಗೆ ಛಾಯಾ ವಾಹನೋತ್ಸವ ನಡೆಸಲಾಗುವುದು. ಜಾತ್ರೋತ್ಸವ ಹಿನ್ನೆಲೆಯಲ್ಲಿ ಶುಕ್ರವಾರ (ನ.7) ಬೆಳಗ್ಗೆ 11.30ಕ್ಕೆ ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ದೇವಾಲಯಕ್ಕೆ ಆಗಮಿಸಿ ಫಲ ತಾಂಬೂಲ ಅರ್ಪಿಸಿ ಸಾಮೂಹಿಕವಾಗಿ ಪೂಜೆ ಸಲ್ಲಿಸಲಿದ್ದಾರೆ.
ರಥೋತ್ಸವ ದಿನ (ನ.8) ರಥದಲ್ಲಿ ದೇವರನ್ನು ಕುಳ್ಳಿರಿಸಿದ ನಂತರ ಊರಿನವರ ಪರವಾಗಿ ಪ್ರಥಮ ಪೂಜೆ ದೇವಸ್ಥಾನ ಸಮಿತಿ ವತಿಯಿಂದ ನಡೆಸಲಾಗುತ್ತದೆ. ರಥೋತ್ಸವದಂದು ಸೇರುವ ಭಕ್ತರಿಗೆ ಅನ್ನದಾನದ ವ್ಯವಸ್ಥೆಯನ್ನೂ ಮಾಡಲಾಗಿದೆ. ಅಂದು ಮಧ್ಯಾಹ್ನ 1 ಗಂಟೆಯಿAದ ಸಂಜೆ 4 ಗಂಟೆ ತನಕ ಮಾರುಕಟ್ಟೆ ರಸ್ತೆಯ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಅನ್ನದಾನ ಇರಲಿದೆ.
ಕುಶಾಲನಗರ ಜಾತ್ರೆಯ ಪ್ರಮುಖ ಆಕರ್ಷಣೆಗಳಲ್ಲಿ ಗೋಜಾತ್ರೆಯೂ ಒಂದು. ಕುಶಾಲನಗರ ಮಾತ್ರವಲ್ಲದೆ ಪಕ್ಕದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕು ಮತ್ತು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರೈತರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದರು. ಗೋ ಪ್ರದರ್ಶನದ ಜತೆಗೆ ಗೋವುಗಳ ಮಾರಾಟವೂ ನಡೆಯುತ್ತಿದ್ದ ಕಾರಣ ದೊಡ್ಡ ಮಟ್ಟದ ವ್ಯವಹಾರವೂ ನಡೆಯುತ್ತಿತ್ತು. ಆದರೆ ವಿವಿಧ ಕಾರಣಗಳಿಂದ ಕಳೆದ ಕೆಲವು ವರ್ಷಗಳಿಂದ ಈ ಗೋ ಜಾತ್ರೆ ಸ್ಥಗಿತವಾಗಿತ್ತು.
ಸ್ಥಗಿತವಾಗಿದ್ದ ಗೋ ಜಾತ್ರೆಗೆ ಕಳೆದ ವರ್ಷ ಮರು ಚಾಲನೆ ನೀಡಲಾಗಿದೆ. ಹಳೆಯ ವೈಭವದೊಂದಿಗೆ ಆಧುನಿಕತೆಯ ಸ್ಪರ್ಶ ಕೊಟ್ಟು ದೇವಾಲಯ ಸಮಿತಿಯಿಂದ ಗೋಜಾತ್ರೆ ನಡೆಸಲಾಗುತ್ತಿದೆ. ಗೋ ಜಾತ್ರೆಗೆ ಕಳೆದ ವರ್ಷ ಉತ್ತಮ ಸ್ಪಂದನೆ ಸಿಕ್ಕಿರುವುದು ಸಮಿತಿ ಸದಸ್ಯರ ಉತ್ಸಾಹ ಇಮ್ಮಡಿಗೊಳಿಸಿದೆ. ಈ ವರ್ಷ ನ. 12 ರಿಂದ ಎರಡು ದಿನಗಳ ಕಾಲ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ಗೋ ಪ್ರದರ್ಶನ ಮತ್ತು ಉತ್ತಮ ರಾಸುಗಳ ಆಯ್ಕೆ ಕಾರ್ಯ ನಡೆಯಲಿದೆ. ನ. 14 ರಂದು ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಜಾತ್ರೋತ್ಸವ ಸಂದರ್ಭ 12 ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರನ್ನು ಹೆಚ್ಚಾಗಿ ಸೆಳೆಯುತ್ತದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮತ್ತಷ್ಟು ಆಕರ್ಷಣೀಯಗೊಳಿಸಲು ಸಾಂಸ್ಕೃತಿಕ ಸಮಿತಿ ಸಿದ್ಧತೆ ನಡೆಸಿದೆ. ನ. 8ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಶುರುವಾಗಲಿದೆ. ನ. 19ರ ತನಕವೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ದಿನ ಸಂಜೆ 7ರಿಂದ 10 ಗಂಟೆ ತನಕ ಪ್ರಸಿದ್ಧ ಕಲಾವಿದರು ಮಾತ್ರವಲ್ಲದೆ ಸ್ಥಳೀಯ ಪ್ರತಿಭೆಗಳೂ ಇಲ್ಲಿ ಪ್ರದರ್ಶನ ನೀಡಲಿದ್ದಾರೆ. ಹಾಡೋಣ ಬಾ ಗಾಯನ ಸ್ಪರ್ಧೆ ಈ ಬಾರಿಯ ಆಕರ್ಷಣೆ ಆಗಿದೆ.
ಈ ವರ್ಷ ಕುಶಾಲನಗರದ ಶ್ರೀ ಗಣಪತಿ ರಥೋತ್ಸವ ಶನಿವಾರ (ನ.8) ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬುಧವಾರದಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದೆ. ರಥೋತ್ಸವದ ದಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ ಒಂದರಿAದ ನಾಲ್ಕು ಗಂಟೆ ತನಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ನ. 8ರಿಂದ ಜಾತ್ರಾ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ಮನರಂಜನಾ ಪಾರ್ಕ್ ತೆರೆಯಲಾಗುತ್ತದೆ. ನ 12 ರಿಂದ ಎರಡು ದಿನಗಳ ಕಾಲ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ಗೋ ಜಾತ್ರೆ ನಡೆಯಲಿದೆ.
ಎಂ.ಕೆ. ದಿನೇಶ್, ಅಧ್ಯಕ್ಷ, ಶ್ರೀ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿ
ಪ್ರತಿ ವರ್ಷದಂತೆ ಈ ವರ್ಷವೂ ಆಕರ್ಷಣೀಯ, ಅರ್ಥಪೂರ್ಣ ಹಾಗೂ ಜನಮನ ಸೆಳೆಯುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತಿದೆ. ನ. 8 ರಂದಲೇ ಆರಂಭವಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳು ನ. 19ರ ತನಕ ಮುಂದುವರಿಯಲಿದೆ. ನ. 17ರಂದು ಹಾಡೋಣ ಬಾರ ಹೆಸರಿನಲ್ಲಿ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ. ಇದರ ಜತೆಯಲ್ಲಿ ಉತ್ತಮವಾದ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ಪ್ರಸಿದ್ಧ ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ. ಸ್ಥಳೀಯ ಪ್ರತಿಭೆಗಳಿಗೂ ಅವಕಾಶ ಮಾಡಿಕೊಡಲಾಗುತ್ತಿದೆ.
ವಿ.ಪಿ. ಶಶಿಧರ್, ಅಧ್ಯಕ್ಷ, ಶ್ರೀ ಗಣಪತಿ ಜಾತ್ರೋತ್ಸವ ಸಾಂಸ್ಕೃತಿಕ ಸಮಿತಿ