ಜಿಲ್ಲೆ

ಶನೈಶ್ಚರಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ

ರೇಷ್ಮೆ ನಗರ ಡೆಸ್ಕ್

ಮಾಗಡಿ : ತಾಲೂಕಿನ ಪ್ರಸಿದ್ಧ ವೀರೇಗೌಡನದೊಡ್ಡಿ ಗ್ರಾಮದ ಕುಂತಿಕಲ್ಲು ಬಳಿ ತಾರಾವೃಕ್ಷದಲ್ಲಿ ಉದ್ಭವಿಸಿರುವ ಶ್ರೀ ಶನೈಶ್ಚರಸ್ವಾಮಿ, ಶ್ರೀಜೇಷ್ಠಾದೇವಿ ಹಾಗೂ ಶ್ರೀನೀಲಾದೇವಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.

ಶಾಸಕ ಎಚ್.ಸಿ.ಬಾಲಕೃಷ್ಣ ಪ್ರಥಮ ಪೂಜೆ ಸಲ್ಲಿಸಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ರಥಕ್ಕೆ ಧವನ ಬಾಳೆಹಣ್ಣನ್ನು ಎಸೆದು ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರು.

ಬ್ರಹ್ಮರಥೋತ್ಸವದ ಪ್ರಯುಕ್ತ ಪಾನಕ, ಮಜ್ಜಿಗೆ, ಕೊಸಂಬರಿ ಸೇರಿ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು. ಬ್ರಹ್ಮ ರಥೋತ್ಸವಕ್ಕೆ ರಾಜ್ಯದ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಭಾಗವಹಿಸಿದರು.

ಬ್ರಹ್ಮರಥೋತ್ಸವ ಮಹೋತ್ಸವದಲ್ಲಿ ಹೆಸರಾಂತ ಗುಂಗರಹಳ್ಳಿ, ಮಂಚನಬೆಲೆ, ಸೊಂಡೇಕೊಪ್ಪ ಬಸವಣ್ಣಗಳ ಆಗಮನದಿಂದ ಜಾತ್ರೆಗೆ ಮೆರಗು ಬಂದಿತ್ತು. ಹೆಸರಾಂತ ಹರಿಕಥೆ ವಿದ್ವಾನ್ ಶಿವಾರ ಉಮೇಶ್ ಅವರು ತಮ್ಮ ಅದ್ಬುತ ಹಾಡುಗಳ ಜತೆಗೆ ಶನಿಪ್ರಭಾವ ಹರಿಕಥೆ ನಡೆಸಿಕೊಟ್ಟರು.

ಕಣ್ಮನ ಸೆಳೆದ ಮಟ್ಟಿ ಕುಸ್ತಿ: ರಥೋತ್ಸವದಲ್ಲಿ ಮಟ್ಟಿ ಕುಸ್ತಿ ಪಂದ್ಯಾವಳಿ ಆಯೋಜಿಸಿಲಾಯಿತು. ಈ ಪಂದ್ಯಾವಳಿಯಲ್ಲಿ ವಿವಿಧ ಕಡೆಯಿಂದ ಕುಸ್ತಿ ಪಟುಗಳು ಭಾಗವಹಿಸಿದರು. ವಿಜೇತ ಕುಸ್ತಿ ಪಟುವಿಗೆ ಬೆಳ್ಳಿಗದೆ ನೀಡಿ ಗೌರವಿಸಲಾಯಿತು. ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲ ಕುಸ್ತಿಪಟುಗಳಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು.

ಶ್ರೀ ಸಿದ್ದೇಶ್ವರಸ್ವಾಮಿಯವರ ಕರಗೋತ್ಸವ, ಮುನೇಶ್ವರಸ್ವಾಮಿಯ ಕುಂಭೋತ್ಸವ ಹಾಗೂ ಶ್ರೀ ಮಹದೇಶ್ವರಸ್ವಾಮಿಯ ಧೂಪೋತ್ಸವದಲ್ಲಿ ಮಂಗಳ ವಾದ್ಯದೊಂದಿಗೆ ಭಾಗವಹಿಸಿದ್ದ ವೀರಗಾಸೆ ಕಲಾವಿದರ ಕುಣಿತ, ಪಟ್ಟದಕುಣಿತ, ಜಾತ್ರೆಗೆ ಮೆರುಗು ನೀಡಿದವು.

ರಥೋತ್ಸವದ ಪ್ರಯುಕ್ತ ದೇವಾಲಯದಲ್ಲಿ ತಿರುಕಲ್ಯಾಣೋತ್ಸವ, ಹೋಮ ಸೇರಿ ಬೆಳಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿತು. ದೇವಾಲಯವನ್ನು ವಿಶೇಷ ಹೂವಿನಗಳಿಂದ ಅಲಂಕರಿಸಲಾಗಿದ್ದು, ಸಂಜೆ ಸ್ವಾಮಿಯವರ ಉಯ್ಯಲೆ ಉತ್ಸವ ನೆರವೇರಿತು.

ಶಾಸಕ ಎಚ್.ಸಿಬಾಲಕೃಷ್ಣ ಮಾತನಾಡಿ, ಶ್ರೀ ಶನೈಶ್ಚರಸ್ವಾಮಿ ದೇಗುಲ ಪುರಾತನವಾಗಿದ್ದು, ದಿನೇದಿನೆ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಗ್ರಾಮೀಣ ಭಾಗದಲ್ಲಿ ರಥೋತ್ಸವಗಳನ್ನು ಪೂರ್ವಿಕರ ಕಾಲದಿಂದ ನಡೆಸಿಕೊಂಡು ಬರಲಾಗಿದೆ. ನಾವು ಮುಂದಿನ ತಲೆಮಾರಿಗೆ ಕೋಡೋಯ್ಯುವ ಕೆಲಸ ಮಾಡಬೇಕಿದೆ.

ಮಂಚನಬೆಲೆಯಿಂದ ವೀರೇಗೌಡನ ದೊಡ್ಡಿಯವರೆಗೆ 8 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಅದರೊಂದಿಗೆ ಶ್ರೀ ಶನೈಶ್ವರ ದೇವಾಲಯದಿಂದ ಮುಖ್ಯ ರಸ್ತೆಯವರೆಗೆ ರಸ್ತೆ ಅಭಿವೃದ್ಧಿಪಡಿಸಿ ದೇವಾಲಯವನ್ನು ಸಮಗ್ರ ಅಭಿವೃದ್ಧಿಪಡಿಸಲಾಗುವುದು ಎಂದರು.

ಜೆಪಿ.ಪೌಂಡೇಷನ್ ಅಧ್ಯಕ್ಷ ಜೆ.ಪಿ.ಚಂದ್ರೇಗೌಡ, ಮಂಚನಬೆಲೆ ಲೋಕೇಶ್, ಉಮೇಶ್, ಗ್ರಾಪಂ ಮಾಜಿ ಅಧ್ಯಕ್ಷರಾದ ಜಯಣ್ಣ, ಡೋಲಾ ರಂಗನಾಥ್, ಪರಶಿವಮೂರ್ತಿ, ಸಿದ್ದಲಿಂಗಪ್ರಸಾದ್, ದೊಡ್ಡಿ ಲೋಕೇಶ್, ಮಂಡಿ ಪ್ರಕಾಶ್, ಪೊಲೀಸ್ ಸಚ್ಚಿದಾನಂದ ಮೂರ್ತಿ, ಬಸವರಾಜ್, ದೊಡ್ಡಿ ಗೋಪಿ, ಸೊಂಡೆಕೊಪ್ಪ ರವಿ, ಮಹೇಶ್, ಮುಖೇಶ್, ಮಧು, ಅಂಬರೀಶ್, ದೇವಸ್ಥಾನದ ಪ್ರಧಾನ ಅರ್ಚಕ ಸಿದ್ದಪ್ಪ, ಅರ್ಚಕ ಶಿವಕುಮಾರ್ ಸೇರಿ ಸಾವಿರಾರು ಭಕ್ತರು ಭಾಗವಹಿಸಿದ್ದರು.