ಜಿಲ್ಲೆ

ಅರಮನೆ ಆವರಣದಲ್ಲಿ ರಥಸಪ್ತಮಿ : ಉತ್ಸವ ಮೂರ್ತಿಗಳ ಮೆರವಣಿಗೆ

ಮೈಸೂರು: ರಥ ಸಪ್ತಮಿ ಪ್ರಯುಕ್ತ ಬುಧವಾರ ಮೈಸೂರು ಅರಮನೆ ಆವರಣದ ದೇವಾಲಯಗಳ ಉತ್ಸವ ಮೂರ್ತಿ ಮೆರವಣಿಗೆ ಶ್ರದ್ಧಾ, ಭಕ್ತಿಯೊಂದಿಗೆ ನೆರವೇರಿತು.

ಅರಮನೆ ಆವರಣದ ಎಲ್ಲ ದೇವಾಲಯಗಳ ಉತ್ಸವ ಮೂರ್ತಿಗಳನ್ನು ಅಲಂಕರಿಸಿ ಅರಮನೆ ಆವರಣದಲ್ಲಿ ಮೆರವಣಿಗೆ ಮಾಡಲಾಯಿತು. ಬೆಳಗ್ಗೆ ಎಲ್ಲ ದೇವಾಲಯಗಳಲ್ಲೂ ವಿಶೇಷ ಪೂಜಾ ಕೈಂಕರ್ಯ ಜರುಗಿತು. ಬಳಿಕ ಉತ್ಸವ ಮೂರ್ತಿಯನ್ನು ಅಲಂಕರಿಸಿ ಚಿಕ್ಕ ರಥಗಳಲ್ಲಿರಿಸಿ ಮೆರವಣಿಗೆ ನಡೆಸಲಾಯಿತು. ನಂತರ ಅರಮನೆ ಪ್ರಾಂಗಣದಲ್ಲಿ ಉತ್ತರ ಮುಖವಾಗಿ ಸಾಲಾಗಿ ನಿಲ್ಲಿಸಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಈ ವರ್ಷ ರಥಸಪ್ತಮಿ ಎರಡು ದಿನ ಬಂದಿರುವುದರಿಂದ ಮಂಗಳವಾರ ಯೋಗಪಟುಗಳು ಸಾಮೂಹಿಕ 108 ನಮಸ್ಕಾರ, ಮಂತ್ರ ಪಠಣೆ ಮಾಡಿದ್ದರು. ನಕ್ಷತ್ರಕ್ಕೆ ಅನುಗುಣವಾಗಿ ಬುಧವಾರ ದೇವಾಲಯಗಳಲ್ಲಿ ಸಾಂಪ್ರದಾಯಿಕವಾಗಿ ರಥೋತ್ಸವ ನಡೆಸಲಾಯಿತು.

ಅರಮನೆ ಆವರಣದಲ್ಲಿರುವ ಖಿಲ್ಲೆ ವೆಂಕಟರಮಣ, ವರಹಾಸ್ವಾಮಿ, ಲಕ್ಷ್ಮೀರಮಣ, ತ್ರೀನೇಶ್ವರ, ಗಾಯತ್ರಿದೇವಿ, ಭುವನೇಶ್ವರಿ, ಪ್ರಸನ್ನ ಕೃಷ್ಣಸ್ವಾಮಿ ಸೇರಿದಂತೆ ಎಂಟು ದೇವಾಲಯಗಳ ಉತ್ಸವ ಮೂರ್ತಿಯನ್ನು ಒಂದೇ ಸಮಯದಲ್ಲಿ ದೇವಾಲಯದಿಂದ ಹೊರಗೆ ತಂದು ಸಾಲಾಗಿ ಮೆರವಣಿಗೆ ನಡೆಸಿ ಅರಮನೆ ಪ್ರಾಂಗಣದ ಮುಂದೆ ನಿಲ್ಲಿಸಲಾಯಿತು.

ಅರಮನೆ ಆವರಣದಲ್ಲಿ ರಥಸಪ್ತಮಿ ಹಿನ್ನೆಲೆಯಲ್ಲಿ ವಿವಿಧ ದೇವಾಲಯಗಳ ಉತ್ಸವ ಮೂರ್ತಿಗಳ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲು ವಿವಿಧ ಬಡಾವಣೆಗಳಿಂದ ನೂರಾರು ಮಂದಿ ಆಗಮಿಸಿದ್ದರು. ಬೆಳಗ್ಗೆ 7.30ರಿಂದ ಮಧ್ಯಾಹ್ನ 12 ಗಂಟೆವರೆಗೆ ಅಪಾರ ಸಂಖ್ಯೆಯ ಭಕ್ತರು ಅರಮನೆ ಆವರಣಕ್ಕೆ ಬಂದು ದರ್ಶನ ಪಡೆದರು. ಇದೇ ವೇಳೆ ಕೆಲವರು ಸಿಹಿ ತಂದು ಹಂಚಿದರೆ, ದೇವಾಲಯಗಳ ಪುರೋಹಿತರು ಪ್ರಸಾದ ವಿನಿಯೋಗಿಸಿದರು.