ಜಿಲ್ಲೆ

ಭರದಿಂದ ಸಾಗಿದೆ ರಥ ನಿರ್ಮಾಣ ಕಾರ್ಯ

ಅಶೋಕ್ ಕುಮಾರ್ ಎನ್

ಅರಕೇರಾ: ಪಟ್ಟಣದ ಐತಿಹಾಸಿಕ ಸೂಗುರೇಶ್ವರ ದೇವಸ್ಥಾನದ ರಥ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

ದೇವಸ್ಥಾನದಲ್ಲಿ ಈ ಹಿಂದೆ ಇದ್ದ ರಥ ಸುಮಾರು 60 ವರ್ಷ ಹಳೆಯದ್ದಾಗಿದ್ದರಿಂದ ಹೊಸ ರಥ ನಿರ್ಮಾಣ ಕಾರ್ಯ ನಡೆದಿದೆ. ಸಾಗುವಾನಿ, ನೆಲಮದ್ದು, ಹತ್ತಿ ಕಟ್ಟಿಗೆಯನ್ನು ರಥ ನಿರ್ಮಾಣಕ್ಕೆ ಬಳಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಿಂದ ಕಟ್ಟಿಗೆಯನ್ನು ತರಿಸಲಾಗಿದೆ. ಭಕ್ತರು ಸಂಗ್ರಹಿಸಿದ ಸುಮಾರು 80 ಲಕ್ಷ ರೂ. ದೇಣಿಗೆಯಲ್ಲಿ 36 ಅಡಿ ಎತ್ತರದ ರಥ ನಿರ್ಮಾಣ ಮಾಡಲಾಗುತ್ತಿದೆ. ಶೇ.80 ಕಾರ್ಯ ಪೂರ್ಣಗೊಂಡಿದೆ.
ರಥದಲ್ಲಿ ಸೂಗೂರೇಶ್ವರ, ಬಂಗಾರೆಮ್ಮ ದೇವಿ, ಬಸವಣ್ಣ, ಗಣೇಶ, ಪಂಚಪೀಠ ಜಗದ್ಗುರುಗಳು, ನಾಗರಮೂರ್ತಿ ಹಾಗೂ ಇತರ ವಿವಿಧ ಕಲಾಕೃತಿಗಳನ್ನು ಕೆತ್ತನೆ ಮಾಡಿ ವಿನ್ಯಾಸಗೊಳಿಸಲಾಗಿದೆ. ಬೆಳ್ಳಿ ಛತ್ರಿ ಸೇರಿದಂತೆ ಮುದುಗಲ್ ಮೂಲದ ಕಲ್ಲುಗಳಿಂದ ನಾಲ್ಕು ಗಾಲಿ ತಯಾರಿ ಆಗಿವೆ.

ಲಿಂಗಸೂಗೂರು ತಾಲೂಕು ಹಟ್ಟಿ ಮೂಲದ ಕುಶಲಕರ್ಮಿ ಅರವಿಂದಪ್ಪ ನೇತೃತ್ವದ 6 ಶಿಲ್ಪಿಗಳ ತಂಡ ರಥ ನಿರ್ಮಾಣ ಮಾಡುತ್ತಿದೆ. ಡಿಸೆಂಬರ್ ಮೊದಲ ವಾರದಲ್ಲಿ ಜರುಗುವ ಜಾತ್ರಾ ಮಹೋತ್ಸವದಲ್ಲಿ ಶ್ರೀಶೈಲ ಜಗದ್ಗುರುಗಳಾದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರಿಂದ ರಥ ಲೋಕಾರ್ಪಣೆಗೊಳ್ಳಲಿದೆ.