ಜಿಲ್ಲೆ

ದರ ಘೋಷಿಸಿ ಕಾರ್ಖಾನೆ ಆರಂಭಿಸಲಿ

ಪ್ರಶಾಂತ ಹೂಗಾರ

ಕಾಗವಾಡ: ರಾಜ್ಯ ಸರ್ಕಾರ ಕಬ್ಬಿನ ಕಾರ್ಖಾನೆಗಳನ್ನು ನ.8ರ ನಂತರ ಪ್ರಾರಂಭಿಸಲು ಆದೇಶ ನೀಡಿದ್ದು, ತಾಲೂಕಿನ ಕೆಲ ಕಾರ್ಖಾನೆಗಳು ಈಗಾಗಲೇ ಪ್ರಾರಂಭಗೊಂಡಿವೆ. ಕಬ್ಬಿನ ದರ ಘೋಷಣೆ ಮಾಡದೇ ಕಾರ್ಖಾನೆ ಪ್ರಾರಂಭಿಸಬಾರದು ಎಂದು ತಾಲೂಕಿನ ಕಬ್ಬು ಬೆಳೆಗಾರರು ತಹಸೀಲ್ದಾರ್ ರಾಜೇಶ ಬುರ್ಲಿ ಮತ್ತು ಕಾಗವಾಡ ಪಿಎಸ್‌ಐ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ರೈತ ಮುಖಂಡ ಸುರೇಶ ಚೌಗುಲೆ ಮಾತನಾಡಿ, ಈ ಮೊದಲು ರಾಜ್ಯ ಸರ್ಕಾರ ನ.15ರ ನಂತರ ಕಾರ್ಖಾನೆ ಪ್ರಾರಂಭಿಸಲು ಸೂಚಿಸಿತ್ತು. ಆದರೆ, ನಿನ್ನೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ರೈತರ ಮತ್ತು ಕಾರ್ಖಾನೆ ಮಾಲೀಕರ ಸಭೆಯಲ್ಲಿ ನ.8ರ ನಂತರ ಕಾರ್ಖಾನೆ ಪ್ರಾರಂಭಿಸಲು ಸೂಚಿಸಿದ್ದರೂ ಅದನ್ನು ಗಾಳಿಗೆ ತೂರಿದ ಕಾರ್ಖಾನೆಗಳು ಆದೇಶ ಉಲ್ಲಂಘಿಸಿ, ಕಬ್ಬು ಕಟಾವು ಪ್ರಾರಂಭಿಸಿವೆ ಎಂದು ದೂರಿದರು.

ಕೇಂದ್ರ ಸರ್ಕಾರ ಈ ವರ್ಷ ಎಫ್‌ಆರ್‌ಪಿಯಲ್ಲಿ 10.25 ರಿಕವರಿಗೆ 250 ರೂ. ದರ ಹೆಚ್ಚಿಸಿದೆ. ಕಳೆದ ಹಂಗಾಮಿನಲ್ಲಿ ಕಬ್ಬು ಪೂರೈಕೆ ಮಾಡಿದ ರೈತರಿಗೆ ಕಾರ್ಖಾನೆ ರಿಕವರಿ ಪ್ರಕಾರ ಹೆಚ್ಚಿಗೆ ದರ ಘೋಷಿಸಬೇಕು. ದರ ನಿಗದಿ ಮಾಡದಿರುವ ಕಾರ್ಖಾನೆಗಳಿಗೆ ಯಾವ ರೈತರು ಕಬ್ಬು ಪೂರೈಕೆ ಮಾಡಬಾರದು. ಒಂದು ವೇಳೆ ರೈತರು ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಿದರೆ ಅದಕ್ಕೆ ರೈತರೇ ಹೊಣೆಗಾರರು ಎಂದು ಸ್ಪಷ್ಟಪಡಿಸಿದ್ದಾರೆ.

ರೈತ ಮುಖಂಡರಾದ ಸುರೇಶ ಚೌಗುಲೆ, ಅಕ್ಷಯ ಅಕಿವಾಟೆ, ಜಗದೀಶ ಕುಸನಾಳೆ, ಸಂದೀಪ ಕಾಮಗೊಂಡ, ಪ್ರಭಾಕರ ಕುಸನಾಳೆ, ಸುಧಾಕರ ಕುಸನಾಲೆ, ಪ್ರಲ್ಹಾದ ದಿವಟೆ, ಅಭಯ ಖಿದ್ರಾಪುರೆ, ಕಾಕಾ ಪಾಟೀಲ, ಅಶೋಕ ಪೂಜೇರಿ, ಅಮೀತ ಬಿಂದಗೆ, ಪ್ರಕಾಶ ಹುನ್ನರಗೆ ಇತರರು ಇದ್ದರು.