ಚಿಕ್ಕಮಗಳೂರು: ದೆಹಲಿ ಚಲೋ ಕಾರ್ಯಕ್ರಮಕ್ಕೆ ಹೊರಟಿದ್ದ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಮತ್ತು ಕಾರ್ಮಿಕ ಸಂಘಟನೆಗಳ ವಿರುದ್ಧ ಅರೆಸೇನಾ ಪಡೆ ಬಳಸಿ ಹೋರಾಟ ಹತ್ತಿಕ್ಕಲು ಕೇಂದ್ರ ಸರ್ಕಾರ ಯತ್ನಿಸಿದೆ ಎಂದು ಆರೋಪಿಸಿ ರೈತ ಸಂಘ ಹಸಿರುಸೇನೆ ಕಾರ್ಯಕರ್ತರು ಬುಧವಾರ ನಗರದಲ್ಲಿ ರಸ್ತೆತಡೆ ನಡೆಸಿದರು.
ನಗರ ಹೊರವಲಯದ ಎಐಟಿ ವೃತ್ತದ ಕೆಎಂ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಬುಧವಾರ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿ ಭೂ ಸುಧಾರಣೆ ಹಾಗೂ ಎಪಿಎಂಸಿ ಕಾಯ್ದೆ ವಿರೋಧಿಸಿ ಸರ್ಕಾರ ಜಾರಿಗೊಳಿಸಿರುವ ಹೊಸ ಕೃಷಿ ಮಸೂದೆ ಹಿಂಪಡೆಯುವಂತೆ ಆಗ್ರಹಿಸಿದರು.
ಸೇನೆ ಬಳಸಿದ್ದು ಪ್ರಜಾತಂತ್ರ ವಿರೋಧಿ
ಜಿಲ್ಲಾಧ್ಯಕ್ಷ ಡಿ.ಆರ್.ದುಗ್ಗಪ್ಪಗೌಡ ಮಾತನಾಡಿ, ದೆಹಲಿ ಚಲೋ ಕಾರ್ಯಕ್ರಮಕ್ಕೆ ಹೊರಟಿದ್ದ ರೈತರು, ಕಾರ್ಮಿಕರು, ಜನಸಾಮಾನ್ಯರ ಹೋರಾಟ ಹತ್ತಿಕ್ಕಲು ಸೇನೆ ಬಳಸಿರುವುದು ಪ್ರಜಾತಂತ್ರ ವಿರೋಧಿಯಾಗಿದೆ. ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿರುವ ಭೂ ಸುಧಾರಣೆ ಹಾಗೂ ಎಪಿಎಂಸಿ, ಕಾರ್ಮಿಕ, ವಿದ್ಯುತ್ ಹಾಗೂ ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ ಮಾಡಿ ಗಾಮೀಣ ಜನರನ್ನು ಕೃಷಿಯಿಂದ ಒಕ್ಕಲೆಬ್ಬಿಸುವಂತೆ ಮಾಡಿ ಕಾರ್ಪೋರೇಟ್ ಕಂಪನಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಕೂಲ ಕಲ್ಪಿಸಿವೆ ಎಂದು ದೂರಿದರು.
ಈಗಾಗಲೆ ಬಿತ್ತನೆ ಬೀಜದ ಸಾರ್ವಭೌಮತ್ವ ರೈತರ ಕೈತಪ್ಪಿದ್ದು ಈರುಳ್ಳಿ, ಆಲೂಗೆಡ್ಡೆ, ಮೆಕ್ಕೆಜೋಳ, ಎಣ್ಣೆ, ಬೇಳೆಕಾಳು, ಸಿರಿಧಾನ್ಯಗಳನ್ನು ಅಗತ್ಯ ವಸ್ತುಗಳ ಕಾಯ್ದೆಯಿಂದ ಹೊರಗಿಟ್ಟಿರುವುದರಿಂದ ಇವುಗಳ ಕನಿಷ್ಠ ಬೆಂಬಲ ಬೆಲೆ ನಿರ್ಧರಿಸುವ ಹಕ್ಕು ಸರ್ಕಾರದ ಹಿಡಿತ ತಪ್ಪಿ ಬಂಡವಾಳ ಶಾಹಿಗಳ ಹಿಡಿತಕ್ಕೆ ನೀಡಿದಂತಾಗಿದೆ. ಹೊಸಕೃಷಿ ನೀತಿಯಿಂದ ಪುಷ್ಪಕೃಷಿ, ತೋಟ, ಮತ್ಸ್ಯಕೃಷಿ ಬದಲಾಗಿ ಗ್ರಾಮೀಣ ಜನರ ಪರಂಪರಾನುಗತವಾದ ಖನಿಜ, ಜೈವಿಕ ಸಂಪತ್ತು ಸೇರಿ ವಿವಿಧ ರೀತಿಯ ಜೀವನ ಕ್ರಮ ಹಾಗೂ ಸಾರ್ವಭೌಮತ್ವದ ಹಕ್ಕುಗಳನ್ನು ಬಿಟ್ಟು ಬದುಕುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಭ್ರಷ್ಟಾಚಾರ ನಿಯಂತ್ರಿಸಬೇಕು
ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ನಿಯಂತ್ರಿಸಬೇಕು. ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಮಸೂದೆ ಹಿಂಪಡೆದು ಭೂ ಸುಧಾರಣೆ, ಎಪಿಎಂಸಿ ಕಾಯ್ದೆಯನ್ನು ಹಿಂದಿನಂತೆ ಮುಂದುವರೆಸಬೇಕು ಎಂದು ಆಗ್ರಹಿಸಿದರು.
ರೈತರ ದಮನ ನೀತಿ
ರಾಜ್ಯ ಉಪಾಧ್ಯಕ್ಷ ಎಂ.ಮಹೇಶ್ ಮಾತನಾಡಿ, ರೈತರು ಹೋರಾಟ ಮಾಡಲು ಮುಂದಾದರೆ ಹೆದ್ದಾರಿಯಲ್ಲಿ ಬೇಲಿ ಕಂದಕ ನಿರ್ಮಿಸಿ ಅಶ್ರುವಾಯು ಪ್ರಯೋಗಿಸಿ ಲಾಠಿಚಾರ್ಜ್ ಮಾಡಿ ರೈತರನ್ನು ಬಂಧಿಸಿರುವುದು ಕೇಂದ್ರ ಸರ್ಕಾರದ ರೈತರ ದಮನ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶೇ.65 ರಷ್ಟು ರೈತರು ಕೃಷಿಯಾಧಾರಿತ ಜೀವನ ನಡೆಸುತ್ತಿದ್ದು ಅವರಲ್ಲಿ ಶೇ.90ರಷ್ಟು ರೈತರು ಎರಡು ಹೆಕ್ಟೇರ್ ಒಳಗೆ ಭೂಮಿ ಹೊಂದಿದವರು. ಹೀಗಾಗಿ ಭೂ ಸುಧಾರಣೆ ಕಾಯ್ದೆ ಸಡಿಲಗೊಳಿಸಿದರೆ ರೈತರ ಭವಿಷ್ಯದ ಕನಸು ನುಚ್ಚು ನೂರಾಗುತ್ತದೆ ಎಂದರು.
ಬಿಗಿ ಪೊಲೀಸ್ ಪಹರೆಯಲ್ಲಿ ರಸ್ತೆತಡೆ ನಡೆಸಿದ ಪರಿಣಾಮ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡು ಹತ್ತಾರು ಸವಾರರು ಕೆಲಕಾಲ ಪರದಾಡುವಂತಾಯಿತು.
ಜಿಲ್ಲಾ ಕಾರ್ಯದರ್ಶಿ ಬಿ.ಸಿ.ದಯಾನಂದ್, ಎಂ.ಸಿ.ಬಸವರಾಜ್, ಉದ್ದೇಗೌಡ, ವೃಷಭರಾಜ್, ಕಡೂರು ತಾಲೂಕು ಅಧ್ಯಕ್ಷ ನಿರಂಜನಮೂರ್ತಿ, ತರೀಕೆರೆ ಅಧ್ಯಕ್ಷ ಓಂಕಾರಪ್ಪ, ಮೂಡಿಗೆರೆ ಪಿ.ಕೆ.ನಾಗೇಶ್, ಮಂಜೇಗೌಡ ಪ್ರತಿಭಟನೆಯಲ್ಲಿದ್ದರು.