ಎಂ.ಎಸ್.ಶಶಿಕಲಾ 
ಜಿಲ್ಲೆ

ಜು. 13ರಂದು ರಾಷ್ಟ್ರೀಯ ಲೋಕ ಅದಾಲತ್

ಎಂ.ರವಿ

ಬೇಲೂರು: ತಾಲೂಕು ಕಾನೂನು ಸೇವಾ ಸಮಿತಿಯಿಂದ ಜುಲೈ 13 ರಂದು ರಾಷ್ಟ್ರೀಯ ಬೃಹತ್ ಲೋಕ ಅದಾಲತ್ ಕಾರ್ಯಕ್ರಮವನ್ನು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಎಸ್.ಶಶಿಕಲಾ ಹೇಳಿದರು.

ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಹಿರಿಯ ಮತ್ತು ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ ಹಲವಾರು ವರ್ಷಗಳಿಂದ ಬಾಕಿ ಉಳಿದಿರುವ ಚೆಕ್ ಕೇಸುಗಳು, ಬ್ಯಾಂಕ್ ಸಾಲದ ಕೇಸುಗಳು, ದಾಂಪತ್ಯದ ಕೇಸುಗಳು ಹಾಗೂ ಜಮೀನಿಗೆ ಸಂಬಂಧಿಸಿದಂತೆ ಹಲವಾರು ಸಣ್ಣ-ಪುಟ್ಟ ಕೇಸುಗಳನ್ನು ವರ್ಷಾನುಗಟ್ಟಲೇ ಬಗೆಹರಿಸಿಕೊಳ್ಳದೆ ಬಾಕಿ ಇರುವ ಸಿವಿಲ್ ದಾವೆ ಮತ್ತು ಕ್ರಿಮಿನಲ್ ದಾವೆಗಳನ್ನು ಉಭಯತ್ರರಲ್ಲಿ ಸಂಧಾನ ಮಾಡಿಸುವುದರ ಮೂಲಕ ಅದಾಲತ್‌ನಲ್ಲಿ ಬಗೆಹರಿಸಿಕೊಂಡು ಕಕ್ಷಿದಾರರು ಸಣ್ಣಪುಟ್ಟ ವ್ಯಾಜ್ಯಗಳಿಗಾಗಿ ಹಲವು ವರ್ಷಗಳ ಕಾಲ ನ್ಯಾಯಾಲಯಕ್ಕೆ ಅಲೆದಾಡುವುದನ್ನು ತಪ್ಪಿಸಲು ಸುಪ್ರೀಂ ಕೋರ್ಟ್ ಆದೇಶದಂತೆ ರಾಷ್ಟ್ರೀಯ ಬೃಹತ್ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಲೋಕ ಅದಾಲತ್‌ನಲ್ಲಿ ವ್ಯಾಜ್ಯಗಳಿಗೆ ಸಂಬಂಧಪಟ್ಟ ಅರ್ಜಿದಾರರು, ಬೇಲೂರು ತಾಲೂಕು ಎಲ್ಲ ಬ್ಯಾಂಕಿನ ವ್ಯವಸ್ಥಾಪಕರು ಹಾಗೂ ವಕೀಲ ಮಿತ್ರರಲ್ಲಿ ರಾಷ್ಟ್ರೀಯ ಬೃಹತ್ ಲೋಕ ಅದಾಲತ್‌ನಲ್ಲಿ ಸಹಕರಿಸುವಂತೆ ಮನವಿ ಮಾಡಲಾಗಿದೆ. ಕಕ್ಷಿದಾರರು ಹೂಡಿರುವ ಯಾವುದೇ ರೀತಿಯ ದಾವೆಗಳನ್ನು ಅಥವಾ ಸಣ್ಣಪುಟ್ಟ ವ್ಯಾಜ್ಯಗಳು ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳು ರಾಷ್ಟ್ರೀಯ ಬೃಹತ್ ಲೋಕ ಅದಾಲತ್ ಮೂಲಕ ಬಗೆಹರಿಸಿಕೊಳ್ಳಬೇಕಾಗಿ ತಾಲೂಕು ಕಾನೂನು ಸೇವಾ ಸಮಿತಿಯಿಂದ ಕೋರಲಾಗುತ್ತಿದ್ದು, ಇದರ ಸದುಪಯೋಗವನ್ನು ಕಕ್ಷಿದಾರರು ಪಡೆದುಕೊಳ್ಳಬೇಕೆಂದು ತಿಳಿಸಿದರು.

ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ನಾಗೇಂದ್ರ, ಸರ್ಕಾರಿ ಅಭಿಯೋಜಕರಾದ ಗೀತಾಮಣಿ, ಶಶಿಕಲಾ, ವಕೀಲರ ಸಂಘದ ಕಾರ್ಯದರ್ಶಿ ಜಿ.ಸಿ.ಪುಟ್ಟಸ್ವಾಮಿಗೌಡ ಇದ್ದರು.