ಮಂಡ್ಯ: ರಾಷ್ಟ್ರಕವಿ ಕುವೆಂಪು ರಚಿಸಿರುವ ರಾಮಾಯಣ ದರ್ಶನಂ ಜನಸಾಮಾನ್ಯರ ಬದುಕಿಗೆ ಸಂಸ್ಕೃತಿ ಪ್ರಿಯತೆಯನ್ನು ತಂದು ಕೊಡುವ ಹಾಗೂ ಕಾವ್ಯಗಳ ಮೇಲೆ ಮೇಲಿನ ನಿರಂತರ ಅಭಿಮಾನ ಉಕ್ಕಿಸುವ ಕಾರ್ಯವನ್ನು ಮಾಡುವಲ್ಲಿ ಪ್ರೇರಣೆಯಾಗಿದೆ ಎಂದು ಯುವ ಸಾಹಿತಿ ಕೊತ್ತತ್ತಿ ರಾಜು ಅಭಿಪ್ರಾಯಿಸಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಾಮಾಯಣ ದರ್ಶನಂ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡಿಗರು ಹಾಗೂ ರಾಷ್ಟ್ರದ ಕಾವ್ಯ ಪ್ರಪಂಚದಲ್ಲಿ ಸಂಚಲನ ಉಂಟು ಮಾಡಿದ ರಾಮಾಯಣ ದರ್ಶನಂ ಅತ್ಯಂತ ಪ್ರಭಾವದ ಮಹಾಕಾವ್ಯಗಳಲ್ಲಿ ಒಂದಾಗಿದೆ. ವಾಲ್ಮೀಕಿ ರಾಮಾಯಣದ ಮೂಲ ಆಧಾರಿತ ಕಾವ್ಯವನ್ನು ಗಮನದಲ್ಲಿಟ್ಟುಕೊಂಡು ರಚಿಸಿದ್ದರೂ ಈ ಮಹಾಕಾವ್ಯದಲ್ಲಿ ವೈಚಾರಿಕತೆ, ಸ್ತ್ರೀ ಸಮಾನತೆ, ಮೂಢನಂಬಿಕೆಗಳ ವಿರುದ್ದ ಉದಾತ್ತ ಅಂಶಗಳನ್ನು ಬಿಂಬಿಸಲಾಗಿದೆ ಎಂದರು.
ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಆದರ್ಶ ನಡೆ, ನುಡಿಗಳು ಇಂದಿನ ಸಮಾಜಕ್ಕೆ ಪ್ರೇರಣೆಯನ್ನು ನೀಡಿದೆ. ರಾಜಧರ್ಮ, ಪ್ರಜಾಪ್ರಭುತ್ವ ಜನಗಳಿಗೆ ಆಸರೆಯಾಗಿ ಮಾರ್ಗದರ್ಶನ, ಪಿತೃವಾಕ್ಯ ಪರಿಪಾಲನೆ, ಹಿರಿಯರಲ್ಲಿಟ್ಟ ನಂಬಿಕೆ ಮತ್ತು ಗೌರವಗಳನ್ನು ಅತ್ಯಂತ ಪ್ರಭಾವಶಾಲಿಯಾಗಿ ರಾಮಾಯಣ ದರ್ಶನಂನಲ್ಲಿ ಬಿಂಬಿಸಲಾಗಿದೆ ಎಂದು ಹೇಳಿದರು.
ಹಿರಿಯ ಗಮಕಿ ಕಲಾಶ್ರೀ, ಕಾಶಿವಿಶ್ವನಾಥ ದತ್ತಿ ನಿಧಿ ಸ್ಥಾಪಕಿ ಉಷಾ, ಶಿಕ್ಷಕಿ ಶ್ವೇತಾ, ಗಮಕಿ ಕಲಾಶ್ರೀ ವಿದ್ಯಾಶಂಕರ್, ಪ್ರಾಧ್ಯಾಪಕಿ ಡಾ.ಕೆಂಪಮ್ಮ ಇತರರಿದ್ದರು.
ಇದೇ ವೇಳೆ ರಾಮಾಯಣ ದರ್ಶನಂ ಮಹಾಕಾವ್ಯದ ಭಾರತಮಾತೆ ಎಂಬ ಪ್ರಸಂಗವನ್ನು ಖ್ಯಾತ ಸಂಗೀತ ವಿದುಷಿ ಗಮಕಿ ಮೈಸೂರಿನ ಧರಿತ್ರಿ ಆನಂದರಾವ್ ವಾಚಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.