ಜಿಲ್ಲೆ

ಎಸ್​ಡಿಎಂನಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಪಲ್ಮನೇರಿ ಅಲ್ವಿಯೋಲಾರ್​ ಪ್ರೋಟಿನೋಸಿಸ್​ (ಪಿಎಪಿ) ಎಂಬ ಶ್ವಾಸಕೋಶದ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ನಗರದ ಎಸ್​ಡಿಎಂ ಆಸ್ಪತ್ರೆ ವೈದ್ಯರು ಯಶಸ್ವಿ ಚಿಕಿತ್ಸೆ ನೀಡುವ ಮೂಲಕ ಮಹತ್ತರ ಸಾಧನೆ ಮಾಡಿದ್ದಾರೆ.

45 ವರ್ಷದ ಹಾವೇರಿ ಮೂಲದ ರೋಗಿಯು ಫೆಬ್ರವರಿಯಲ್ಲಿ ತೀವ್ರ ಉಸಿರಾಟದ ತೊಂದರೆಯಿಂದ ಎಸ್​ಡಿಎಂ ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆರೋಗ್ಯದಲ್ಲಿ ಸುಧಾರಣೆ ಕಾಣದ್ದಕ್ಕೆ ಹೆಚ್ಚಿನ ತಪಾಸಣೆ ನಡೆಸಿದಾಗ ಪಿಎಪಿ ಎಂಬ ಅಪರೂಪದ ಕಾಯಿಲೆ ಪತ್ತೆಯಾಗಿದೆ.

ಕಾಯಿಲೆಗೆ ಹೊಲ್​ ಲಂಗ್​ ಲಾವಾಜೆ ವಿಧಾನ ಮೂಲಕ ಚಿಕಿತ್ಸೆ ನೀಡಲಾಗಿದೆ. ಬಳಿಕ ರೋಗಿಯನ್ನು ವೆಂಟಿಲೇಟರ್​ನಿಂದ ಹೊರತೆಗೆದು ಸಂಪೂರ್ಣ ಚೇತರಿಸಿಕೊಳ್ಳುವಂತೆ ಮಾಡಲಾಗಿದೆ. ಇಂತಹ ಅಪರೂಪದ ಕಾಯಿಲೆಗೆ ಉತ್ತರ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಯಶಸ್ವಿ ಚಿಕಿತ್ಸೆ ನೀಡಿರುವುದು ವಿಶೇಷ.

ಪಿಎಪಿ ಎಂಬುದು ಶ್ವಾಸಕೋಶದ ಅಪರೂಪದ ಕಾಯಿಲೆಗಳಲ್ಲಿ ಒಂದು. ಪ್ರತಿ 10 ಲಕ್ಷ ಜನರಲ್ಲಿ 1-2 ಜನರಲ್ಲಿ ಕಾಣಿಸಿಕೊಳ್ಳುತ್ತದೆ. ಹೆಚ್ಚಾಗಿ ಮಧ್ಯಮ ವಯಸ್ಸಿನ, ಅದರಲ್ಲೂ ಗಂಡಸರಲ್ಲಿ ಕಂಡುಬರುತ್ತದೆ. ಕಾಯಿಲೆಯಿಂದ ಬಳಲುವವರಿಗೆ ಉಸಿರಾಟ ಸಮಸ್ಯೆ, ಒಣ ಕೆಮ್ಮು, ಆಯಾಸ ಹಾಗೂ ಸಲ್ಪ ಮಟ್ಟಿಗೆ ಜ್ವರ ಕಾಣಿಸಿಕೊಳ್ಳಬಹುದು. ಕಾಯಿಲೆಯಲ್ಲಿ ಶ್ವಾಸಕೋಶದ ಅಲ್ವಿಯೋಲ್ಯೆಗಳಲ್ಲಿ ಅತಿಯಾದ ಸರಫ್ಯೆಕ್ಟೆಂಟ್​ ಎಂಬ ಅಂಶ ತುಂಬಿಕೊಳ್ಳುತ್ತದೆ. ಕಾಯಿಲೆಯನ್ನು ಬ್ರಾಂಕೋಸ್ಕೊಪಿ ಮೂಲಕ ಪತ್ತೆಹಚ್ಚಿ ಹೊಲ್​ ಲಂಗ್​ ಲಾವಾಜೆ ವಿಧಾನದ ಮೂಲಕ ಚಿಕಿತ್ಸೆ ನೀಡಬಹುದು.

ಇಂತಹ ಅಪರೂಪದ ಸಾಧನೆ ಮಾಡಿದ ವೈದ್ಯರಾದ ಡಾ. ಸಂಜಯ ಎಸ್​. (ಶ್ವಾಸಕೋಶ ತಜ್ಞ), ಡಾ. ಗುಣವತಿ, ಡಾ. ನಾಗೇಶ ಜಕರೆಡ್ಡಿ (ತೀವ್ರ ನಿಗಾ ಘಟಕ ತಜ್ಞ) ಕಾರ್ಯಕ್ಕೆ ಎಸ್​ಡಿಎಂ ವಿವಿ ಉಪಕುಲಪತಿ ಡಾ. ನಿರಂಜನ್​ಕುಮಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.