ಜಿಲ್ಲೆ

ಅಪರೂಪದ ಪುರುಷ ವೇಷ ಪದ್ಧತಿ : ಆರಾಧನಾ ಕೇಂದ್ರಗಳಿಗೆ ಧನ ಸಂಗ್ರಹ ಬೆಳ್ತಂಗಡಿ, ಬುಡೇರಿಯಾದಲ್ಲಿ ಪದ್ಧತಿ ಜೀವಂತ

Avinash R

ಪ್ರವೀಣ್‌ರಾಜ್ ಕೊಲ ಕಡಬ

ಹಲವು ಸಂಪ್ರದಾಯಗಳ ತವರೂರು ತುಳುನಾಡು. ಕಡಬ ತಾಲೂಕಿನ ಆಲಂಕಾರು ಗ್ರಾಮದ ಬುಡೇರಿಯಾ ಬೈಲಿನಲ್ಲಿ ಪುರುಷ ವೇಷ ಧರಿಸಿದ ತಂಡ ಧಾರ್ಮಿಕ ಜಾಗೃತಿಯೊಂದಿಗೆ ಮನೆ ಮನೆಗೆ ತೆರಳಿ ಗ್ರಾಮದ ಆರಾಧನೆ ಕೇಂದ್ರಗಳ ಆರ್ಥಿಕ ಚೈತನ್ಯಕ್ಕೆ ಧನ ಸಂಗ್ರಹಿಸುವ ಅಪರೂಪದ ಪದ್ಧತಿ ಇಂದಿಗೂ ಜೀವಂತವಿದೆ.

ಪುರುಷ ವೇಷದ ಕಾರ್ಯ

ವಿವಿಧ ವೇಷ ಧರಿಸಿದ ಎಂಟು ಜನರ ತಂಡ ಮನೆ ಮನೆಗೆ ತೆರಳಿ ತಮ್ಮ ವೇಷಕ್ಕೆ ತಕ್ಕಂತೆ ನರ್ತಿಸುತ್ತಾರೆ. ದೇವರ ಮೂರ್ತಿ ಹೊರುವವ, ದೈವದ ಪರಿಚಾರಕ, ಅರ್ಚಕ, ಸಹಾಯಕ, ಮುಸ್ಲಿಂ , ಸ್ತ್ರೀ ವೇಷಧಾರಿ, ಇಬ್ಬರು ಬೈದರ್ ವೇಷ ಹೀಗೆ ಎಂಟು ಜನರ ತಂಡವಿದು. ಪೋಷಕ ವೇಷಧಾರಿಗಳು ಸೇರಿ ಸುಮಾರು 15 ವೇಷಧಾರಿಗಳಿರುವ ತಂಡವಾಗುತ್ತದೆ. ರಾತ್ರಿಯಲ್ಲಿ ಚೆಂಡೆ, ವಾಳಗದ ಸದ್ದಿನೊಂದಿಗೆ ಊರಿನಾದ್ಯಂತ ತಿರುಗಾಟ ನಡೆಸುತ್ತಾರೆ. ಮನೆಯಂಗಳದಲ್ಲಿ ಹತ್ತು ನಿಮಿಷ ನರ್ತಿಸುತ್ತಾರೆ. ಹೀಗೆ ಎಲ್ಲ ಮನೆಗಳಿಂದ ಧನ ಸ್ವೀಕರಿಸಿ ತಿರುಗಾಟ ಕೊನೆಗೊಳಿಸುತ್ತಾರೆ.

ಸಂಗ್ರಹಿಸಿದ ಎಲ್ಲವನ್ನೂ ಗ್ರಾಮದ ದೈವಸ್ಥಾನ್ಕಕೆ ಒಪ್ಪಿಸಲಾಗುತ್ತದೆ. ಊರಿನ ದುಷ್ಟ ಶಕ್ತಿ ದೂರವಾಗುವುದರ ಜತೆ ದೈವಿಶಕ್ತಿ ನೆಲೆಗೊಳ್ಳುತ್ತದೆ ಎಂಬ ನಂಬಿಕೆ ಈ ಕಾರ್ಯದ ಹಿಂದೆ ಅಡಗಿದೆ ಎಂದು ಈ ಭಾಗದ ಹಿರಿಯ ಪಜ್ಜಡ್ಕ ಈಶ್ವರ ಗೌಡರು ಹೇಳುತ್ತಾರೆ.

ತಿರುಗಾಟದ ವೇಳೆ ಪ್ರತಿ ವೇಷಧಾರಿ ಶುದ್ಧ ವ್ರತದಲ್ಲಿರಬೇಕು. ಕಾಸರಕ ಮರದ ಕೆಳಗೆ ವೇಷ ವಿಸರ್ಜಿಸುವ ಮೂಲಕ ದಿನದ ತಿರುಗಾಟ ಅಂತ್ಯಗೊಳಿಸುವುದು ವಾಡಿಕೆ.

ನಿಗದಿಪಡಿಸಿದ ದಿನದಂದು ತಿರುಗಾಟ ಕೊನೆಯಾಗಲಿದ್ದು, ಈ ವೇಳೆ ನಿರ್ಧರಿಸಿದ ಮನೆಯೊಂದರಲ್ಲಿ ಪೂಜೆಗಳು ನಡೆಯುತ್ತವೆ. ಪ್ರತಿ ವೇಷಧಾರಿಯೂ ಕದ್ರಿ ದೇವಳದ ಪ್ರಸಾದ ಸೇವಿಸಿ ವೇಷ ವಿಸರ್ಜಿಸುತ್ತಾರೆ. ಪ್ರತಿ ವೇಷಧಾರಿಗೆ ದಿನದ ಲೆಕ್ಕದಂತೆ ಒಂದು ಕೆಜಿ ಅವಲಕ್ಕಿಯನ್ನು ವೇತನವಾಗಿ ನೀಡಲಾಗುತ್ತದೆ.
ಆರು ದಿನದ ತಿರುಗಾಟದಲ್ಲಿ ಬೈಲಿನ 130 ಮನೆಗಳ ಜತೆ ಪಕ್ಕದ ಕೊಂಡಾಡಿ ಕೊಪ್ಪ, ಕಮಿತ್ತಿಲು, ಏಣಿತ್ತಡ್ಕ ಬೈಲಿನ ಸಹಿತ 145 ಮನೆಗಳಿಗೆ ವೇಷಧಾರಿಗಳು ತೆರಳುತ್ತಾರೆ.

ಆಚರಣೆಯ ಹಿನ್ನೆಲೆ

ಎಂಬತ್ತರ ದಶಕದಲ್ಲಿ ಈ ಭಾಗದ ಹಿರಿಯರು ಗ್ರಾಮದ ಶಿರಾಡಿ ದೈವಸ್ಥಾನದ ಜೀರ್ಣೋದ್ದಾರ ಸಂಕಲ್ಪ ಕೈಗೊಂಡರು. ಆರ್ಥಿಕತೆಗೆ ಬಲ ತುಂಬುವ ಉದ್ದೇಶದಿಂದ ಪುರುಷ ವೇಷ ಧರಿಸಿ ಧನ ಸಂಗ್ರಹದ ಪದ್ಧತಿ ಆರಂಭಿಸಿದ್ದು, ಇಂದಿಗೂ ಮುಂದುವರಿದಿದ್ದು, ಯುವಕರು ಈ ಕಾರ್ಯ ಮುಂದುವರಿಸುತ್ತಿದ್ದಾರೆ.

ಬುಡೇರಿಯಾ ಭಾಗದಲ್ಲಿ ಎಂಬತ್ತರ ದಶಕದಲ್ಲಿ ಪುರುಷ ವೇಷ ಎಂಬ ಧಾರ್ಮಿಕ ಕಾರ್ಯ ಆರಂಭಿಸಲಾಯಿತು. ಈ ಹಿಂದೆ ಮಂಗಳೂರಿನ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಧನ ಸಂಗ್ರಹಕ್ಕಾಗಿ ಈ ಕಾರ್ಯ ಮಾಡಲಾಗಿತ್ತು ಎನ್ನುವ ಪ್ರತೀತಿಯಿದೆ ಮಾಹಿತಿ ಪ್ರಕಾರ ಈ ರೀತಿಯ ಪದ್ಧತಿ ಜಿಲ್ಲೆಯ ಬೆಳ್ತಂಗಡಿ ಭಾಗದಲ್ಲಿ ಬಿಟ್ಟರೆ ಬುಡೇರಿಯಾದಲ್ಲಿ ಮಾತ್ರ ಇದೆ.-ಈಶ್ವರ ಗೌಡ ಪಜ್ಜಡ್ಕ, ಹಿರಿಯರು https://www.vijayavani.net/car-accident-in-k-c-road https://www.vijayavani.net/dakshina-kannada-1-42-ltr-liqour-sezed