ಜಿಲ್ಲೆ

ಅತ್ಯಾಚಾರ ಎಸಗಿದವನ ಬಂಧನ

ರೇಷ್ಮೆ ನಗರ ಡೆಸ್ಕ್

ಹಾರೋಹಳ್ಳಿ: ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದವನನ್ನು ಹಾರೋಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಯನ್ನು ಕನಕಪುರ ಮೂಲದ ಈಶ್ವರರಾವ್​ ಎಂದು ಗುರುತಿಸಲಾಗಿದ್ದು, ಈತ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಬನ್ನಿಕುಪ್ಪೆ ಬಳಿಯ ಕಾರ್ಖಾನೆಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್​ ಆಗಿದ್ದ ಎಂದು ತಿಳಿದು ಬಂದಿದೆ.

ಏನಿದು ಘಟನೆ?: ತಾಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿರುವ ಬನ್ನಿಕುಪ್ಪೆ ಗ್ರಾಮದ ಕಾರ್ಖಾನೆಯೊಂದರ ಸೆಕ್ಯೂರಿಟಿ ಗಾರ್ಡ್​ ಆಗಿದ್ದ ಈಶ್ವರರಾವ್​, ಗ್ರಾಮದ ಮನೆಯೊಂದರಲ್ಲಿ ಮಾನಸಿಕ ಅಸ್ವಸ್ಥ ಯುವತಿ ಇರುವುದನ್ನು ಗಮನಿಸಿದ್ದ. ಅಲ್ಲದೇ ಆಕೆಯನ್ನು ಮನೆಯಲ್ಲಿಯೇ ಬಿಟ್ಟು ತಂದೆ&ತಾಯಿ ಕೆಲಸಕ್ಕೆ ಹೋಗುವುದನ್ನು ಹಲವು ದಿನಗಳಿಂದ ಗಮನಿಸಿದ್ದ. ಎಂದಿನಂತೆ ಸೆ.29ರಂದು ಮಗಳನ್ನು ಬಿಟ್ಟು ಪಾಲಕರು ಕೆಲಸಕ್ಕೆ ಹೋಗಿದ್ದ ವೇಳೆ ಆರೋಪಿ ಈಶ್ವರರಾವ್​ ನೀರು ಕೇಳುವ ನೆಪದಲ್ಲಿ ಮನೆಗೆ ಹೋಗಿ ಯುವತಿಯನ್ನು ಎಳೆದಾಡಿದ್ದಾನೆ. ಈ ವೇಳೆ ಯುವತಿ ಹೇಗೋ ಮನೆಯ ಬಾಗಿಲು ಹಾಕಿಕೊಂಡು ತಪ್ಪಿಸಿಕೊಂಡಿದ್ದಳು. ಇಷ್ಟಕ್ಕೆ ಸುಮ್ಮನಾಗದ ಆರೋಪಿ ಮತ್ತೆ ಮಧ್ಯಾಹ್ನ ಮನೆಗೆ ಹೋಗಿ ಅತ್ಯಾಚಾರ ಎಸಗಿ, ಯಾರಿಗಾದರೂ ಹೇಳಿದರೆ ಪ್ರಾಣ ತೆಗೆಯುವುದಾಗಿ ಬೆದರಿಕೆಯೊಡ್ಡಿ ಪರಾರಿಯಾಗಿದ್ದ. ಸಂಜೆ ಕೆಲಸದಿಂದ ಪಾಲಕರು ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಈ ಸಂಬಂಧ ಪಾಲಕರು ಹಾರೋಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು.