ಉಡುಪಿ: ಶ್ರವಣ ಸಮಸ್ಯೆ ಬಗ್ಗೆ ಪ್ರಾಥಮಿಕ ಹಂತದಲ್ಲೇ ತಿಳಿದು, ತ್ವರಿತ ಚಿಕಿತ್ಸೆ ಪಡೆಯುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಜಿಲ್ಲಾಸ್ಪತ್ರೆಯ ಕಿವಿ, ಮೂಗು, ಗಂಟಲು ತಜ್ಞ ಡಾ.ಮುರಳೀಧರ ಪಾಟೀಲ್ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಸಹಯೋಗದಲ್ಲಿ ಬುಧವಾರ ವಿಶ್ವ ಶ್ರವಣ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕಿವುಡುತನದಿಂದ ಸಂವಹನ ಸಮಸ್ಯೆ ಉಂಟಾಗಿ ಮಾನಸಿಕ ಸಮಸ್ಯೆಗಳಿಗೆ ಒಳಗಾದರೆ ಉದ್ಯೋಗದಲ್ಲಿ ಪ್ರಗತಿ ಕಾಣಲು ಸಾಧ್ಯವಾಗದು. ಮಕ್ಕಳಲ್ಲಿ ಕಿವುಡುತನ ಬಂದರೆ ಮಾತನಾಡಲು ಸಹ ಕಷ್ಟವಾಗಲಿದೆ. ಆದ್ದರಿಂದ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.
ತಕ್ಷಣ ಕಂಡುಬರುವ ಶ್ರವಣ ಸಮಸ್ಯೆಗಳಿಗೆ ತ್ವರಿತ ಚಿಕಿತ್ಸೆ ಪಡೆದರೆ ಶೇ.90ರಷ್ಟು ಗುಣಪಡಿಸಲು ಸಾಧ್ಯ. ಮೊಬೈಲ್‌ನಲ್ಲಿ ಇಯರ್ ಫೋನ್ ಮೂಲಕ ಹೆಚ್ಚು ಹೊತ್ತು ಮಾತನಾಡುವುದು, ಸಂಗೀತ ಕೇಳುವುದು ಸಹ ಅಪಾಯ. ಮೊಬೈಲ್‌ನ ಸಾಮಾನ್ಯ ಸ್ಪೀಕರ್‌ನಿಂದ ಕೇಳಿಸಿಕೊಳ್ಳಬೇಕು. ಆನ್‌ಲೈನ್ ತರಗತಿಯಿಂದ ಮಕ್ಕಳ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಸಂಶೋಧನೆ ನಡೆಯುತ್ತಿದೆ. ಕಿವಿಯಲ್ಲಿ ಹತ್ತಿ ಇಟ್ಟುಕೊಳ್ಳುವುದು. ಮಫ್ಲ್ಲರ್ ಬಳಕೆ ಇತ್ಯಾದಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಡಿಎಚ್‌ಒ ಡಾ.ಸುದೀರ್‌ಚಂದ್ರ ಸೂಡಾ ಅಧ್ಯಕ್ಷತೆ ವಹಿಸಿದ್ದರು. ಶ್ರವಣ ದಿನದ ಅಂಗವಾಗಿ ಪೊಲೀಸ್ ಸಿಬ್ಬಂದಿಗೆ ಉಚಿತ ಶ್ರವಣ ಪರೀಕ್ಷಾ ಶಿಬಿರ ನಡೆಸಲಾಯಿತು. ಆಡಿಯೋಮೆಟ್ರಿಕ್ ಸಹಾಯಕಿ ಸಮೀಕ್ಷಾ ಡಿ.ರಾವ್ ಸ್ವಾಗತಿಸಿದರು. ಆಡಿಯಾಲಜಿಸ್ಟ್ ಪ್ರತೀಕ್ಷಾ ಬಿ. ವಂದಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ನೋಡಲ್ ಅಧಿಕಾರಿ ಡಾ.ಶ್ರೀರಾಮ ರಾವ್ ಮಾತನಾಡಿ, ಭಾರತದಲ್ಲಿ 100ರಲ್ಲಿ 6 ಜನರಿಗೆ ಶ್ರವಣ ಸಮಸ್ಯೆ ಇದೆ. ನವಜಾತ 100 ಶಿಶುಗಳಲ್ಲಿ ಇಬ್ಬರಿಗೆ ಕಿವುಡು ಸಮಸ್ಯೆ ಇದೆ. ಮಕ್ಕಳಿಗೆ ಆರೋಗ್ಯ ಇಲಾಖೆಯಿಂದ ನೀಡುವ ಎಲ್ಲ ರೀತಿಯ ಲಸಿಕೆಗಳನ್ನೂ ನೀಡಬೇಕು. ಶ್ರವಣ ಸಮಸ್ಯೆ ಇರುವವರಿಗೆ ರೆಡ್‌ಕ್ರಾಸ್ ಸಹಯೋಗದಲ್ಲಿ ಉಚಿತ ಶ್ರವಣ ಸಾಧನ ವಿತರಿಸಲು ಕ್ರಮ ಕೈಗೊಂಡಿದ್ದು, ಅಗತ್ಯವಿರುವವರು ಹೆಸರು ನೊಂದಾಯಿಸಬೇಕು ಎಂದು ಹೇಳಿದರು.