ಜಿಲ್ಲೆ

ಕೋವಿಡ್ ರೋಗಿಗಳಿಂದ ದಿಢೀರ್ ಪ್ರತಿಭಟನೆ

ಬ್ಯಾಡಗಿ: ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್​ನ ರೋಗಿಗಳಿಗೆ ಊಟ, ವಸತಿಯನ್ನು ಸಮಯಕ್ಕೆ ಸರಿಯಾಗಿ ನೀಡುತ್ತಿಲ್ಲ, ಗುಣಮಟ್ಟದ ಆಹಾರ ಪೂರೈಸುತ್ತಿಲ್ಲ ಎಂದು ಆರೋಪಿಸಿ ಕೇಂದ್ರದಿಂದ ಹೊರಬಂದ ರೋಗಿಗಳು ಶುಕ್ರವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಇಲ್ಲಿನ ಕೇರ್ ಸೆಂಟರ್​ನಲ್ಲಿ 38 ಜನ ಕರೊನಾ ಪಾಸಿಟಿವ್ ಹೊಂದಿರುವವರಿಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ಬೆಳಗ್ಗೆ 8 ಗಂಟೆಗೆ ಉಪಾಹಾರ ನೀಡಲಾಗುತ್ತಿತ್ತು. ಆದರೆ, ಇಲ್ಲಿನ ವ್ಯವಸ್ಥಾಪಕರ ಹೊಂದಾಣಿಕೆ ಕೊರತೆಯಿಂದಾಗಿ ಸಮಸ್ಯೆ ತೀವ್ರಗೊಂಡಿದೆ. ಬಹುತೇಕ ರೋಗಿಗಳು ಸಕ್ಕರೆ ಕಾಯಿಲೆ, ಅಸ್ತಮಾ, ಎಸಿಡಿಟಿ ಹೀಗೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇಂತಹ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಉಪಾಹಾರ ನೀಡದಿದ್ದರೆ, ಆರೋಗ್ಯ ಇನ್ನಷ್ಟು ಹದಗೆಡುವ ಸಾಧ್ಯತೆಯಿದೆ. ಏನಾದರೂ ಹೆಚ್ಚು ಕಮ್ಮಿಯಾದರೆ ಯಾರು ಹೊಣೆ ಎಂಬ ಪ್ರಶ್ನೆ ಉದ್ಭವಿಸಿದೆ.

ಕೇಳುವವರೇ ಇಲ್ಲವಾಗಿದೆ: ಕೇರ್ ಸೆಂಟರ್​ನಲ್ಲಿರುವ ರೋಗಿಯೊಬ್ಬರು ‘ವಿಜಯವಾಣಿ’ ಜತೆ ಮೊಬೈಲ್​ನಲ್ಲಿ ಮಾತನಾಡಿ, ‘ನಾವು ಕರೊನಾ ರೋಗಿಗಳೆಂದು ಗುರ್ತಿಸಿದ ಬಳಿಕ ಭಯ ಆವರಿಸಿದೆ. ವೈದ್ಯರಿಗೆ ಏನನ್ನೂ ಕೇಳಲು ಸಾಧ್ಯವಾಗುತ್ತಿಲ್ಲ. ವ್ಯವಸ್ಥಾಪಕರು ನಮ್ಮ ಬಳಿ ಬರುವುದಿಲ್ಲ. ಪಿಪಿಇ ಕಿಟ್ ಧರಿಸಿ ಯಾರೋ ಬಂದು ನಮಗೆ ಊಟ, ಉಪಾಹಾರ ನೀಡುತ್ತಾರೆ. ಇಲ್ಲಿ ಸಂಬಂಧಿಸಿದವರು ಯಾರೆಂದು ತಿಳಿಯುವುದೇ ಇಲ್ಲ. ದೂರು ನೀಡಲು ಬಹುತೇಕರು ಹಿಂಜರಿಯುತ್ತಿದ್ದಾರೆ. ವಯೋವೃದ್ಧರ ಪರಿಸ್ಥಿತಿ ಹೇಳತೀರದು. ಕೂಡಲೆ ಇಲ್ಲಿನ ಪರಿಸ್ಥಿತಿ ಸುಧಾರಿಸಬೇಕು. ನಿರ್ಲಕ್ಷ್ಯ ತೋರುವವರ ಮೇಲೆ ಕ್ರಮ ಜರುಗಿಸಬೇಕು’ ಎಂದು ಅಳಲು ತೋಡಿಕೊಂಡರು.

ಎಸ್.ಆರ್.ಪಾಟೀಲ ಭೇಟಿ: ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜೈವಿಕ ಇಂಧನ ಮಂಡಳಿ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ, ‘ಕೇರ್ ಸೆಂಟರ್​ನಿಂದ ಹತ್ತಾರು ಜನ ಪೋನ್ ಮಾಡಿದ್ದರು. ರೋಗಿಗಳಿಗೆ ಸಮರ್ಪಕ ಆಹಾರ ನೀಡುತ್ತಿಲ್ಲ, ಇಲ್ಲಿನ ಜನ ತುಂಬಾ ಭಯದಲ್ಲಿದ್ದಾರೆ. ಇವರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು. ಕೇಂದ್ರದಲ್ಲಿ ತಹಸೀಲ್ದಾರ್, ಕೇಂದ್ರದ ವ್ಯವಸ್ಥಾಪಕರ, ಪೊಲೀಸ್ ಇಲಾಖೆ ಅಧಿಕಾರಿಗಳ ಹೆಸರು, ಮೊಬೈಲ್ ಸಂಖ್ಯೆಯನ್ನು ಅಳವಡಿಸಿದಲ್ಲಿ ರೋಗಿಗಳಿಗೆ ತಕ್ಷಣ ದೂರು ಸಲ್ಲಿಸಲು ಅನುಕೂಲವಾಗಲಿದೆ’ ಎಂದರು.

ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪಕ್ಕದ ಮೆಟ್ರಿಕ್ ವಸತಿ ನಿಲಯದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಗುರುವಾರ ರಾತ್ರಿ ಕಟ್ಟಡ ಬದಲಾಯಿಸಿದ್ದು, ಸಿಬ್ಬಂದಿ ತೊಂದರೆಯಿಂದ ಉಪಾಹಾರ ಪೂರೈಕೆ ವಿಳಂಬವಾಗಿದೆ. ಈವರೆಗೂ ಯಾವುದೇ ತೊಂದರೆಯಾಗಿಲ್ಲ, ತಕ್ಷಣ ಎಲ್ಲ ವ್ಯವಸ್ಥೆಯನ್ನು ಸರಿಪಡಿಸಿದ್ದೇವೆ. | ಹನುಮಂತಪ್ಪ ಲಮಾಣಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ