ಜಿಲ್ಲೆ

ಹನೂರಿನಲ್ಲಿ ಶೀಘ್ರ ಡಯಾಲಿಸಿಸ್ ಕೇಂದ್ರ

ಹನೂರು: ಹನೂರಿನಲ್ಲಿ ಶೀಘ್ರ ಡಯಾಲಿಸಿಸ್ ಕೇಂದ್ರ ತೆರೆಯುವುದರ ಜತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೇಗೇರಿಸಲು ಅಗತ್ಯ ಕ್ರಮವಹಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸನ್ಮಾನ ಸ್ವೀಕರಿಸಿದ ಬಳಿಕ ಮಾಜಿ ಶಾಸಕ ಆರ್.ನರೇಂದ್ರ ಅವರಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಹನೂರು ತಾಲೂಕು ರಚನೆಯಾಗಿ 5 ವರ್ಷ ಕಳೆದಿದೆ. ಆದರೆ ತಾಲೂಕು ಮಟ್ಟದ ಆಸ್ಪತ್ರೆ ಇಲ್ಲದಿರುವುದು ಗಮನಕ್ಕೆ ಬಂದಿದೆ. ಈ ದಿಸೆಯಲ್ಲಿ ಅಗತ್ಯ ಕ್ರಮವಹಿಸಿ ಆದ್ಯತೆ ಮೇರೆಗೆ ಪ್ರಸ್ತುತವಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 100 ಹಾಸಿಗೆಯುಳ್ಳ ಆಸ್ಪತ್ರೆಯಾಗಿ ಮೇಲ್ದರ್ಜೇಗೇರಿಸಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಸ್ವಾಮಿ, ಬ್ಲಾಕ್ ಅಧ್ಯಕ್ಷರಾದ ಮುಕುಂದವರ್ಮ, ಈಶ್ವರ್, ಮೈಮುಲ್ ನಿರ್ದೇಶಕ ಶಾಹುಲ್ ಆಹಮದ್, ಜಿಪಂ ಮಾಜಿ ಉಪಾಧ್ಯಕ್ಷ ಬಸವರಾಜು, ತಾಪಂ ಮಾಜಿ ಸದಸ್ಯ ಜವಾದ್ ಆಹಮದ್, ಪಪಂ ಮಾಜಿ ಉಪಾಧ್ಯಕ್ಷ ಬಸವರಾಜು, ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಚೇತನ್ ದೊರೆರಾಜು, ಮುಖಂಡರಾದ ಚಿಕ್ಕತಮ್ಮಯ್ಯ, ಸಿದ್ದರಾಜು, ಪುಟ್ಟರಾಜು, ಕೃಷ್ಣ, ಮಾದೇಶ್ ಇದ್ದರು.