ನಂಜನಗೂಡು: ಮಹಿಳೆ ಮನೆಗೆ ನುಗ್ಗಿ ಆಕೆ ಮೇಲೆ ಅತ್ಯಾಚಾರ ಎಸಗಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಎಳನೀರು ವ್ಯಾಪಾರಿ ನಾಗರಾಜು ಬಂಧಿತ ಆರೋಪಿ. ಉತ್ತರಪ್ರದೇಶ ಮೂಲದ ದಂಪತಿ ದೇವೀರಮ್ಮನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಮಹಿಳೆಯ ಪತಿ ಪಾನಿಪುರಿ ವ್ಯಾಪಾರ ಮಾಡಿಕೊಂಡಿದ್ದರು. ಪಾನಿಪುರಿ ಅಂಗಡಿ ಬಳಿ ಎಳನೀರು ವ್ಯಾಪಾರ ಮಾಡಿಕೊಂಡಿದ್ದ ನಾಗರಾಜು ಏ.5ರಂದು ಮಧ್ಯಾಹ್ನ ಪಾನಿಪುರಿ ವ್ಯಾಪಾರಿ ಪತ್ನಿ ಮನೆಯಲ್ಲಿ ಒಬ್ಬರೇ ಇದ್ದ ವೇಳೆ ನಾಗರಾಜು ಒಳನುಗ್ಗಿ ಚಾಕು ತೋರಿಸಿ ಬೆದರಿಸಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಘಟನೆ ಬಳಿಕ ಮಹಿಳೆಯು ಪತಿಗೆ ಎಲ್ಲ ವಿಷಯವನ್ನು ತಿಳಿಸಿದ್ದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ಆಧರಿಸಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.